ADVERTISEMENT

ಬಾಗಿಲು ಮುಚ್ಚಿದ ಸೈಬರ್ ಕೆಫೆಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಕಿಸ್ತಾವರ್ (ಜಮ್ಮು ಮತ್ತು ಕಾಶ್ಮೀರ) (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟದ ಹೊಣೆ ಹೊತ್ತು ಇ-ಮೇಲ್ ಕಳುಹಿಸಿದ ಮೂವರು ಆರೋಪಿಗಳು ಹಾಗೂ ಇತರ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ ನಂತರ ಇಲ್ಲಿಯ ಸೈಬರ್ ಕೆಫೆ, ಇಂಟರ್‌ನೆಟ್ ಮತ್ತು ಬ್ರೌಸಿಂಗ್ ಕೇಂದ್ರಗಳ ವ್ಯಾಪಾರ, ವಹಿವಾಟು ಗಣನೀಯವಾಗಿ ಕುಸಿದಿದೆ.

ಇದು ಸೈಬರ್ ಕೆಫೆಗಳ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ನೂರಾರು ಯುವಕರು ಭೇಟಿ ನೀಡುತ್ತಿದ್ದ ಗ್ಲೋಬಲ್ ಇಂಟರ್‌ನೆಟ್ ಕೆಫೆಯ ಬಾಗಿಲು ಮುಚ್ಚಿದೆ. ಇಲ್ಲಿಂದಲೇ ಆರೋಪಿಗಳು ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದರು ಎನ್ನಲಾಗಿದೆ. ಈ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದ ನಂತರ ಇಲ್ಲಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ತೀವ್ರ ಇಳಿಮುಖವಾಗಿದೆ.

ಅದರ ಮಾಲೀಕ ಖ್ವಾಜಾ ಮಹಮ್ಮದ್ ಅಜೀಜ್, `ನಾನು ಈಗಾಗಲೇ ಸಾಕಷ್ಟು ಉಡುಗಿ ಹೋಗಿದ್ದೇನೆ~ ಎಂದು ಸುದ್ದಿಗಾರರ ಬಳಿ ಮಾತನಾಡಲು ನಿರಾಕರಿಸಿದರು. ಐದು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ ವಶದಲ್ಲಿದ್ದ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಉಳಿದಂತೆ ನಗರದ ಅನೇಕ ಸೈಬರ್ ಕೆಫೆ, ಇಂಟರ್‌ನೆಟ್ ಕೇಂದ್ರಗಳು ಬಾಗಿಲು ಮುಚ್ಚಿವೆ.

ಘಟನೆಯ ನಂತರ ಭದ್ರತಾ ಸಂಸ್ಥೆಗಳು ಇಂಟರ್‌ನೆಟ್ ಕೇಂದ್ರ ಮತ್ತು ಸೈಬರ್ ಕೆಫೆಗಳಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿವೆ. ಈ ಕೇಂದ್ರಗಳ ಮಾಲೀಕರು ಕಡ್ಡಾಯವಾಗಿ ಪೊಲೀಸ್ ಠಾಣೆಗಳಲ್ಲಿ ಹೆಸರು ನೋಂದಾಯಿಸಬೇಕು ಮತ್ತು ಸಿಸಿಟಿವಿ ಅಳವಡಿಸಬೇಕು ಎಂದು ಆದೇಶ ನೀಡಿದ್ದಾರೆ. ಇದು ತಮ್ಮಿಂದಾಗದ ಕೆಲಸ ಎಂದು ಮಾಲೀಕರು ಅಂಗಡಿಗಳ ಬಾಗಿಲು ಮುಚ್ಚಿದ್ದಾರೆ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.