ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮದ್ರಾಸ್ ಹೈಕೋರ್ಟ್‌ ವಕೀಲನ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 4:59 IST
Last Updated 23 ಏಪ್ರಿಲ್ 2018, 4:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ತಿರುವನಂತಪುರದಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮದ್ರಾಸ್ ಹೈಕೋರ್ಟ್ ವಕೀಲ ಕೆ.ಪಿ. ಪ್ರೇಮ್‌ ಅನಂತ್ ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿ ಅನಂತ್ 2006ರಲ್ಲಿ ತಮಿಳುನಾಡಿನ ಆರ್‌.ಕೆ.ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಾಲಕಿ ಶನಿವಾರ ರಾತ್ರಿ ಕುಟುಂಬದವರ ಜತೆ ರೈಲಿನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದಳು. ಕೊಯಮತ್ತೂರು ಮತ್ತು ಈರೋಡ್‌ ನಡುವೆ ತಡರಾತ್ರಿ 1.15ಕ್ಕೆ ಕಿರುಕುಳ ನೀಡಲಾಗಿದೆ. ಆರೋಪಿ ಕೊಯಮತ್ತೂರಿನಲ್ಲಿ ರೈಲು ಹತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಸಾಮಾನ್ಯ ಟಿಕೆಟ್‌ ಪಡೆದಿದ್ದ ಆರೋಪಿ ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ ಪ್ರವೇಶಿಸಿದ್ದರು. ಮದ್ರಾಸ್‌ ಹೈಕೋರ್ಟ್ ವಕೀಲರ ಸಂಘದ ಗುರುತುಚೀಟಿಯನ್ನೂ ಹೊಂದಿದ್ದ ಅವರು ಬಾಲಕಿ ಮತ್ತು ಆಕೆಯ ಕುಟುಂಬದವರಿದ್ದ ಎದುರಿನ ಬರ್ತ್‌ನಲ್ಲಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ನಾನು ವಕೀಲ, ನನಗೆ ಬಿಜೆಪಿ ಜತೆ ಸಂಪರ್ಕ ಇದೆ’ ಎಂದು ಆರೋಪಿಯು ಸಹ ಪ್ರಯಾಣಿಕರಿಗೆ ಧಮಕಿ ಹಾಕಿದ್ದರು. ನಂತರ ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

ಆರೋಪಿಯ ವಿರುದ್ಧ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)’ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಸ್ಪಷ್ಟನೆ: ಆರೋಪಿ ಪ್ರೇಮ್ ಅನಂತ್‌ಗೆ ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೆಯಿಲ್ಲ. ಸ್ಥಳೀಯ ಮಟ್ಟದಲ್ಲಿ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಜತೆ ಗುರುತಿಸಿಕೊಂಡಿರುವವರು ಅಥವಾ ಯಾರೇ ಆದರೂ ಅಂತಹ ಅಪರಾಧ ಎಸಗಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷೆ ತಮಿಳಿಸಾಯಿ ಸುಂದರರಾಜನ್ ಹೇಳಿರುವುದನ್ನೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.