ತಲಶೇರಿ (ಕೇರಳ) (ಪಿಟಿಐ): ಹದಿಮೂರು ವರ್ಷದ ಬಾಲಕಿಯ ಮೇಲೆ ಸ್ವಂತ ತಂದೆ, ಅಣ್ಣ ಮತ್ತು ಚಿಕ್ಕಪ್ಪ ಎರಡು ವರ್ಷಗಳಿಂದ ಅತ್ಯಾಚಾರವೆಸಗುತ್ತ ಬಂದ ಹೀನ ದುಷ್ಕೃತ್ಯ ಎರಡು ದಿನದ ಹಿಂದೆ ಬೆಳಕಿಗೆ ಬಂದಿದೆ.
ಘಟನೆ ಬೆಳಕಿಗೆ ಬಂದಿದ್ದು: ಕಣ್ಣೂರು ಜಿಲ್ಲೆಯ ಧರ್ಮಡಂನ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ, ಪ್ರತಿ ದಿನ ಶಾಲೆ ಅವಧಿ ಮುಗಿದರೂ `ಮನೆಗೆ ಹಿಂದಿರುಗಲು ಒಲ್ಲೆ' ಎಂದು ಹಟ ಹಿಡಿಯುತ್ತಿದ್ದಳು. ಒಮ್ಮಮ್ಮೆ ಅಳುತ್ತಿದ್ದಳು. ಎರಡು ದಿನದ ಹಿಂದೆ ಶಿಕ್ಷಕಿಯೊಬ್ಬರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ, ಎರಡು ವರ್ಷಗಳಿಂದಲೂ ತಂದೆ, ಸಹೋದರ ಮತ್ತು ಚಿಕ್ಕಪ್ಪನಿಂದ `ಲೈಂಗಿಕ ದೌರ್ಜನ್ಯ'ಕ್ಕೆ ಒಳಗಾಗಿರುವ ಕುರಿತು ಹೇಳಿದ್ದಾಳೆ.
ವಿಷಯ ತಿಳಿದ ಶಾಲೆಯ ಆಡಳಿತ ಮಂಡಳಿ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದರನ್ವಯ ಬಾಲಕಿಯ ತಂದೆ, ಹದಿನೈದು ವರ್ಷದ ಸಹೋದರ ಹಾಗೂ ಚಿಕ್ಕಪ್ಪನ್ನು ಬಂಧಿಸಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ತಲಶೇರಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ವಿ. ವಿನೋದ್ ಕುಮಾರ್ ತಿಳಿಸಿದ್ದಾರೆ.
ಸೋದರನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
`ಆರನೇ ತರಗತಿಯಲ್ಲಿದ್ದಾಗಿನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ನನ್ನ ಅಕ್ಕ ಕೂಡ ಇಂಥದ್ದೇ ದೌರ್ಜನ್ಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಳು' ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ವನಿತಾ ಆಯೋಗ ಆಕ್ರೋಶ: `ಈ ಘಟನೆಯಿಂದ ಇಡೀ ಕೇರಳ ರಾಜ್ಯವೇ ತಲೆತಗ್ಗಿಸುವಂತಾಗಿದೆ' ಎಂದು ಕೇರಳ ವನಿತಾ ಆಯೋಗದ ಅಧ್ಯಕ್ಷೆ ಕೆ.ರೋಸಾಕುಟ್ಟಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ಬಾಲಕಿಯ ಅಕ್ಕನ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.
ಬಾಲಕಿಯ ಬಗ್ಗೆ ವನಿತಾ ಆಯೋಗ ಕಾಳಜಿ ವಹಿಸಲಿದೆ. ಸದ್ಯ ಆಕೆಯನ್ನು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ವಸತಿ ಗೃಹದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.