ADVERTISEMENT

ಬಾಲಕೃಷ್ಣನ್ ಪತ್ರದಲ್ಲಿ ರಾಜಾ ಹೆಸರು ಇರಲಿಲ್ಲ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 9:00 IST
Last Updated 18 ಡಿಸೆಂಬರ್ 2010, 9:00 IST

ನವದೆಹಲಿ (ಪಿಟಿಐ): 2009ರ ಅಗಸ್ಟ್‌ನಲ್ಲಿ ಆಗಿನ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕೆ.ಜಿ.ಬಾಲಕೃಷ್ಣನ್ ಅವರು ತಮಗೆ ಬರೆದ ಪತ್ರದಲ್ಲಿ ದೂರ ಸಂಪರ್ಕ ಖಾತೆ ಮಾಜಿ ಸಚಿವ ರಾಜಾ ಅವರ ಹೆಸರು ಇರಲಿಲ್ಲ ಎಂದು ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದ್ದಾರೆ.

‘ನಾವು ಅವರಿಗೆ (ಕೆ.ಜಿ.ಬಾಲಕೃಷ್ಣನ್) ಪತ್ರ ಬರೆದಿದ್ದೆವು. ಅದಕ್ಕೆ ಅವರು ನೀಡಿದ ಉತ್ತರದಲ್ಲಿ ಯಾವುದೇ ಸಚಿವರ ಹೆಸರೂ ಇರಲಿಲ್ಲ. ಹಾಗಾಗಿ ಅಲ್ಲಿ ವಿವಾದವೇ ಇಲ್ಲ ಎಂದು ಮೊಯಿಲಿ ಹೇಳಿದ್ದಾರೆ.

ಕುಟುಂಬದ ಸ್ನೇಹಿತರೊಬ್ಬರಿಗೆ ಜಾಮೀನು ಪಡೆಯಲು ರಾಜಾ ಅವರು ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು ಎಂದು ಆರೋಪಿಸಿ ಕೆಲವು ಸಂಸದರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಹಿನ್ನೆಲೆಯಲ್ಲಿ ತಾವು ಮುಖ್ಯ ನ್ಯಾಯಮೂರ್ತಿಗಳಿಂದ ಮಾಹಿತಿ ಕೋರಿದ್ದೆವು ಎಂದು ಮೊಯಿಲಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಚ್.ಎಲ್‌ಗೋಖಲೆ ಅವರು ತಮ್ಮ ವರದಿಯಲ್ಲಿ ಯಾವುದೇ ಸಚಿವರ ಹೆಸರನ್ನೂ ಪ್ರಸ್ತಾಪ ಮಾಡಿರಲಿಲ್ಲ ಎಂದು ಎನ್‌ಎಚ್‌ಆರ್‌ಸಿ ಅಧ್ಯಕ್ಷರೂ ಆಗಿರುವ ಬಾಲಕೃಷ್ಣನ್ ಬುಧವಾರ ಸ್ಪಷ್ಟಪಡಿಸಿದ್ದರು. ಅಲ್ಲದೇ ವಿಷಯವನ್ನು ಕಾನೂನು ಸಚಿವಾಲಯದ ಗಮನಕ್ಕೂ ತರಲಾಗಿತ್ತು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.