ADVERTISEMENT

ಬಿಎಸ್‌ವೈ ಸೇರ್ಪಡೆ: ರಾಜ್ಯದ ನಿಯೋಗಕ್ಕೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ವಿಷಯದಲ್ಲಿ ಗೊಂದಲ ಮುಂದುವರಿದಿದೆ. ಸೋಮವಾರ ಸೇರಿದ್ದ  ಸಂಸದೀಯ ಮಂಡಳಿ ಸಭೆಯಲ್ಲಿ ಈ ಸಂಗತಿ ಪ್ರಸ್ತಾಪವಾಗಲಿಲ್ಲ.

ದೆಹಲಿಗೆ ಬಂದಿರುವ ರಾಜ್ಯ ಬಿಜೆಪಿ ನಿಯೋಗಕ್ಕೆ ಸೋಮವಾರ ಹಿರಿಯ ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯ ಬಿಜೆಪಿ ನಾಯಕರ ಒಂದು ಗುಂಪು ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಪುನಃ ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಡ ಹೇರುತ್ತಿದೆ.

ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂದು ಒತ್ತಾಯ ಹೇರಲು ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ,  ಕೆ.ಜಿ. ಬೋಪಯ್ಯ, ಡಿ.ಬಿ.ಚಂದ್ರೇಗೌಡ, ಜಿ.ಎಂ.ಸಿದ್ದೇಶ್ವರ್, ಉಮೇಶ್ ಕತ್ತಿ ಮತ್ತಿತರರನ್ನು ಒಳಗೊಂಡ ರಾಜ್ಯ ಬಿಜೆಪಿ ನಾಯಕರ ನಿಯೋಗ ದೆಹಲಿಗೆ ಬಂದಿದೆ.  ವರಿಷ್ಠರನ್ನು ಕಂಡು ಮಾಜಿ ಮುಖ್ಯಮಂತ್ರಿಯನ್ನು ಮತ್ತೆ ಸೇರಿಸಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲೂ ಸೋಲು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದೆ.

ಆದರೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, `ಏನಾದರೂ ತೀರ್ಮಾನ ಮಾಡಿ, ಆದಷ್ಟು ಬೇಗನೆ ಮಾಡಿ' ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರಿಗೆ ಹೇಳಿದ್ದಾರೆ. ಗೊಂದಲಕ್ಕೆ ತೆರೆ ಎಳೆಯದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಗೌಡರು ಎಚ್ಚರಿಕೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರ ಬಿಜೆಪಿ ಸೇರ್ಪಡೆ ಕುರಿತು ಹಲವು ವರಿಷ್ಠರು ಸಕಾರಾತ್ಮಕ ನಿಲುವು ಹೊಂದಿದ್ದರೂ, ಬಹಿರಂಗವಾಗಿ ಯಾರೂ ಬಾಯಿ ಬಿಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಹೆದರಿ ಇವರೆಲ್ಲರೂ ಮೌನವಾಗಿದ್ದಾರೆಂದು ಮೂಲಗಳು ವಿವರಿಸಿವೆ.

`ಯಡಿಯೂರಪ್ಪ ಬಿಜೆಪಿ ಸೇರುವ ಪ್ರಸ್ತಾಪ ಮಾಡಿದರೆ ರಾಜ್ಯ ಘಟಕ ಅದನ್ನು ಪರಿಶೀಲಿಸಲಿದೆ. ಅನಂತರ ನಿರ್ಣಯ ಮಾಡಿ ಹೈಕಮಾಂಡ್‌ಗೆ ಕಳುಹಿಸಲಿದೆ. ಪಕ್ಷದ ಸಂಸದೀಯ ಮಂಡಳಿಯಲ್ಲಿ ರಾಜ್ಯ ಘಟಕದ ಶಿಫಾರಸು ಕುರಿತು ಚರ್ಚಿಸಿ ನಿರ್ಧಾರ ಮಾಡಲಾಗುವುದು' ಎಂದು ರಾಜ್ಯದ ಉಸ್ತುವಾರಿ ಹೊಣೆಹೊತ್ತಿರುವ ತಾವರ್‌ಚಂದ್ ಗೆಹ್ಲೋಟ್ ಈಗಾಗಲೇ ಹೇಳಿದ್ದಾರೆ. ಅದರಂತೆ ಮಾಜಿ ಮುಖ್ಯಮಂತ್ರಿಗಳಿಂದ ಪ್ರಸ್ತಾಪ ಬರಲಿ ನೋಡೋಣ' ಎನ್ನುವ ನಿಲುವು ಕೆಲವು ಮುಖಂಡರಲ್ಲಿದೆ.

`ಕೆಜೆಪಿ ಮುಖಂಡರನ್ನು ಮರಳಿ ಪಕ್ಷಕ್ಕೆ ತರುವ ಕುರಿತು ರಾಜ್ಯ ಬಿಜೆಪಿ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ವಿಷಯದಲ್ಲಿ ಒಮ್ಮತ ಮೂಡದ ಹೊರತು ತೀರ್ಮಾನ ಕೈಗೊಳ್ಳುವುದು ಕಷ್ಟ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಪಕ್ಷದ ಸಂಸದರು, ಶಾಸಕರು, ಎಲ್ಲ ಜಿಲ್ಲೆಗಳ ಅಧ್ಯಕ್ಷರ ಅಭಿಪ್ರಾಯ ಪಡೆದು ಅನಂತರ ತೀರ್ಮಾನ ಕೈಗೊಳ್ಳಲಿ' ಎಂದು ಅನೇಕರು ಒತ್ತಾಯ ಹೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.