ADVERTISEMENT

ಬಿಹಾರ: ಬಿಜೆಪಿ ಶಾಸಕನ ಆಸ್ತಿ ಮುಟ್ಟುಗೋಲು?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಪಟ್ನಾ (ಐಎಎನ್‌ಎಸ್): ಭ್ರಷ್ಟ ಅಧಿಕಾರಿಗಳ ಆಸ್ತಿ ಜಪ್ತಿ ಬಳಿಕ ಬಿಹಾರದಲ್ಲಿ ಈಗ ಆಡಳಿತಾರೂಢ ಶಾಸಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

ಮೊದಲ ಹೆಜ್ಜೆಯಾಗಿ ಬಿಜೆಪಿ ಶಾಸಕ ಸೋನೇಲಾಲ್ ಹೆಂಬ್ರುಮ್ ಆಸ್ತಿ ಜಪ್ತಿಗೆ ಅನುಮತಿ ನೀಡುವಂತೆ ಕೋರಿ ರಾಜ್ಯ ವಿಚಕ್ಷಣಾ ಇಲಾಖೆ ಪಟ್ನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಹೆಂಬ್ರುಮ್ ಅವರ ಸ್ಥಿರ ಮತ್ತು ಚರ ಆಸ್ತಿ ಜಪ್ತಿಗಾಗಿ ಜಾಗೃತ ಇಲಾಖೆ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದು, ನ್ಯಾಯಾಲಯ ಅನುಮತಿ ನೀಡಿದ ಬಳಿಕ ಆಸ್ತಿ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ವಿಚಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮಾಜಿ ಅಬಕಾರಿ ಉಪ ಆಯುಕ್ತರಾಗಿರುವ ಹೆಂಬ್ರುಮ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಕ್ಕಾಗಿ  ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಸೇವೆಯಲ್ಲಿದ್ದಾಗ 1997ರಲ್ಲಿ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ಪಾಲುದಾರ ಪಕ್ಷವಾಗಿದ್ದು, ಮಾಜಿ ಅಧಿಕಾರಿಗಳು ಹಾಗೂ ಆಡಳಿತಾರೂಢ ಪಕ್ಷದ ಶಾಸಕರ ಆಸ್ತಿ ಜಪ್ತಿಗೆ ಮುಂದಾಗಿರುವುದು ಬಿಹಾರದಲ್ಲಿ ಇದೇ ಪ್ರಥಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.