ADVERTISEMENT

ಬೆಟ್ಟ ಹತ್ತಿದರೂ ತಿಮ್ಮಪ್ಪ ದರ್ಶನ ದುರ್ಲಭ!

​ಪ್ರಜಾವಾಣಿ ವಾರ್ತೆ
Published 20 ಜನವರಿ 2013, 19:59 IST
Last Updated 20 ಜನವರಿ 2013, 19:59 IST
ಬೆಟ್ಟ ಹತ್ತಿದರೂ ತಿಮ್ಮಪ್ಪ ದರ್ಶನ ದುರ್ಲಭ!
ಬೆಟ್ಟ ಹತ್ತಿದರೂ ತಿಮ್ಮಪ್ಪ ದರ್ಶನ ದುರ್ಲಭ!   

ಹೈದಾರಾಬಾದ್: ತಿಮ್ಮಪ್ಪನ ದರ್ಶನಕ್ಕೆ ಹರಕೆ ಹೊತ್ತು ಬೆಟ್ಟ ಹತ್ತಿ ಬರುವ ಭಕ್ತರಿಗೂ ವೆಂಕಟೇಶನ ದರ್ಶನ ದುರ್ಲಭವಾಗಿದೆ.
ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಏರಿ ಬರುವ ಭಕ್ತರಿಗೆ ಯಾವ ಅಡೆತಡೆಯಿಲ್ಲದೆ ಈ ಮೊದಲು ಶ್ರೀನಿವಾಸನ ದರ್ಶನ ದೊರಕುತ್ತಿತ್ತು. ಆದರೆ, ಈಗ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಕಲ್ಪಿಸಿದ್ದ ನೇರ ದರ್ಶನದ  ಅವಕಾಶವನ್ನು ದಿನಕ್ಕೆ 15,000 ಸಂಖ್ಯೆಗೆ ಮಿತಿಗೊಳಿಸಲಾಗಿದೆ.

ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆ ಮಿತಿಗೊಳಿಸುವುದರಿಂದ ನೇರ ಮತ್ತು ಮುಕ್ತ ದರ್ಶನ, ಕೇಶ ಮುಂಡನದ ಹರಕೆ ಮತ್ತು ಲಾಡು ಪ್ರಸಾದ ವಿತರಣೆ ಮೇಲಿನ ಒತ್ತಡ ಕಡಿಮೆ ಆಗಲಿದೆ. ಇದರಿಂದ ಇನ್ನಿತರ ಭಕ್ತರಿಗೆ ಅನುಕೂಲವಾಗಲಿದೆ ಎಂದು `ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ಹೇಳಿದೆ.

ಇನ್ನು ಮುಂದೆ ಕಾಲ್ನಡಿಗೆಯ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಮಾರ್ಗಗಳು ಸಂಜೆ 5ರಿಂದ ಬೆಳಗಿನ 6 ಗಂಟೆಯವರೆಗೆ ಮುಚ್ಚಿರುತ್ತವೆ. ಈ ಮಾರ್ಗದಲ್ಲಿ ಒಂಬತ್ತು ಕಿ.ಮೀ. ಕಾಲ್ನಡಿಗೆ ಹಾದಿ ಹಾಗೂ 3000 ಮೆಟ್ಟಿಲುಗಳು ಇವೆ. ಪ್ರತಿ ದಿನ ಬೆಟ್ಟ ಹತ್ತಲು ಮೊದಲು ಬರುವ 15,000 ಭಕ್ತರಿಗೆ `ದಿವ್ಯ ದರ್ಶನ'ದ ಟೋಕನ್‌ಗಳನ್ನು ನೀಡಲಾಗುತ್ತದೆ. ಈ ಟೋಕನ್ ಬಾಲಾಜಿ ದರ್ಶನ, ಕೇಶ ಮುಂಡನದ ಹರಕೆ ಮತ್ತು ಲಾಡು ಪ್ರಸಾದ ಒಳಗೊಂಡಿರುತ್ತದೆ ಎಂದು `ಟಿಟಿಡಿ' ತಿಳಿಸಿದೆ.

`ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆ 2005ರಲ್ಲಿ ದಿನಕ್ಕೆ 10 ಸಾವಿರದಷ್ಟಿತ್ತು. 2012ರ ಹೊತ್ತಿಗೆ ಈ ಸಂಖ್ಯೆ 30 ಸಾವಿರಕ್ಕೆ ಏರಿಕೆ ಆಗಿತ್ತು. ಇದರಿಂದ ದೇವಾಲಯ ನಿರ್ವಹಣೆ ಮತ್ತು ಮೂಲ ಸೌಕರ‌್ಯ ಕಲ್ಪಿಸುವ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿತ್ತು. ವಾರಾಂತ್ಯಗಳಲ್ಲಿ ಮತ್ತು ಹಬ್ಬ ಹಾಗೂ ಉತ್ಸವದ ಸಮಯಗಳಲ್ಲಿ ಇಂತಹ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿತ್ತು. ಇದರಿಂದ ಖಾತರಿ ಸೇವೆ ಪಡೆಯುವ ಭಕ್ತರ ದೊಡ್ಡ ಸರತಿಯೇ ನಿಲ್ಲುತ್ತಿತ್ತು. ಆದ್ದರಿಂದ ಇಂತಹ ಭಕ್ತರ ಸಂಖ್ಯೆ  ಮಿತಿಗೊಳಿಸಲಾಗಿದೆ' ಎಂದು `ಟಿಟಿಡಿ' ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.