ADVERTISEMENT

ಬೆಳೆ ಸಾಲ ಬಡ್ಡಿ ಸಬ್ಸಿಡಿ

ಈ ವರ್ಷವೂ ಕೃಷಿಸಾಲ ಯೋಜನೆ ಮುಂದುವರಿಕೆ: ಸಚಿವ ಸಂಪುಟ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 20:05 IST
Last Updated 14 ಜೂನ್ 2017, 20:05 IST
ಬೆಳೆ ಸಾಲ ಬಡ್ಡಿ ಸಬ್ಸಿಡಿ
ಬೆಳೆ ಸಾಲ ಬಡ್ಡಿ ಸಬ್ಸಿಡಿ   

ನವದೆಹಲಿ: ಸಾಲಮನ್ನಾಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಗಳಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಅಲ್ಪಾವಧಿ ಬೆಳೆಸಾಲದ ಬಡ್ಡಿಯಲ್ಲಿ ಗರಿಷ್ಠ ಶೇ 5ರ ವರೆಗೆ ರಿಯಾಯತಿ (ಸಬ್ಸಿಡಿ) ನೀಡಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಗರಿಷ್ಠ ₹3 ಲಕ್ಷದವರೆಗಿನ ಅಲ್ಪಾವಧಿ (ಒಂದು ವರ್ಷ ಅವಧಿಯ) ಬೆಳೆಸಾಲದ ಬಡ್ಡಿಯಲ್ಲಿ ಶೇ 2ರಷ್ಟು ರಿಯಾಯತಿ ನೀಡುವ ಈ ಯೋಜನೆ 2017–18ನೇ ಸಾಲಿಗೂ ಮುಂದುವರಿಯಲಿದೆ.

ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೊಕ್ಕಸದ ಮೇಲೆ ₹ 20,339 ಕೋಟಿ ಹೊರೆ ಬೀಳಲಿದೆ ಎಂದು ಸಂಪುಟ ಸಭೆಯ ಬಳಿಕ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಬೆಳೆಸಾಲದ ಮೇಲೆ ಶೇ 9ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಎಲ್ಲ ರೈತರಿಗೂ ಶೇ 2 ರಷ್ಟು ಸಬ್ಸಿಡಿ ಸಿಕ್ಕರೆ,  ಶೇ 9ರ ಬದಲು ಶೇ7ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.

ಸಕಾಲದಲ್ಲಿ ಸಾಲ ಹಿಂದಿರುಗಿಸುವ ರೈತರಿಗೆ ಹೆಚ್ಚುವರಿಯಾಗಿ ಶೇ 3ರಷ್ಟು ಅಂದರೆ, ಶೇ 5ರಷ್ಟು ಸಬ್ಸಿಡಿ ದೊರೆಯಲಿದೆ. ಅಂತಹ ರೈತರು  ಕೇವಲ ಶೇ4ರಷ್ಟು  ಬಡ್ಡಿ ಪಾವತಿಸಿದರೆ ಸಾಕು.

ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾದ ರೈತರ ಬೆಳೆಸಾಲ ಮರು ಹೊಂದಾಣಿಕೆ ಅಥವಾ ಮರು ಪಾವತಿ ವಿಸ್ತರಿಸಿದರೆ ಬ್ಯಾಂಕ್‌ಗಳಿಗೆ ಮೊದಲ ವರ್ಷ(2017–18ರಲ್ಲಿ) ಬಡ್ಡಿಯಲ್ಲಿ ಶೇ2ರಷ್ಟು  ರಿಯಾಯತಿ ದೊರೆಯಲಿದೆ.

ಬೆಳೆ ಅಡಮಾನ ಸಾಲದ ಬಡ್ಡಿಯಲ್ಲಿಯೂ ಕೂಡ ಆರು ತಿಂಗಳು ಶೇ 7ರಷ್ಟು ರಿಯಾಯತಿ ನೀಡಲಾಗುವುದು  ಎಂದು ಅಧಿಕಾರಿ ತಿಳಿಸಿದ್ದಾರೆ.

ಯಾರಿಗೆಲ್ಲ ಸಿಗಲಿದೆ ಸಬ್ಸಿಡಿ?
ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಪಡೆದ ಬೆಳೆ ಸಾಲಕ್ಕೆ ಈ ಸೌಲಭ್ಯ ದೊರೆಯಲಿದೆ. ₹ 3 ಲಕ್ಷದವರೆಗಿನ ಬೆಳೆಸಾಲಕ್ಕೆ ಈ ಸಬ್ಸಿಡಿ ದೊರೆಯಲಿದ್ದು, ಒಂದು ವರ್ಷ ಈ ಯೋಜನೆ ಜಾರಿಯಲ್ಲಿರುತ್ತದೆ.

ಬೆಳೆಸಾಲ ₹10 ಲಕ್ಷ ಕೋಟಿ
2016–17ರಲ್ಲಿ ₹ 9 ಲಕ್ಷ ಕೋಟಿಯಷ್ಟಿದ್ದ  ಬೆಳೆಸಾಲ 2017–18ರಲ್ಲಿ ₹ 10 ಲಕ್ಷ ಕೋಟಿಗೆ ಏರುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.