ADVERTISEMENT

ಬೋಧಗಯಾ ಸ್ಫೋಟ ಐವರಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST

ಪಟ್ನಾ: ಬೋಧ ಗಯಾದಲ್ಲಿ 2013ರಲ್ಲಿ ಸ್ಫೋಟ ನಡೆಸಿದ ಇಂಡಿಯನ್‌ ಮುಜಾಹಿದೀನ್‌ನ (ಐಎಂ) ಐವರು ಉಗ್ರರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಮೇ 25ರಂದು ತಪ್ಪಿತಸ್ಥರು ಎಂದು ಘೋಷಿಸಲಾದ ಇಮ್ತಿಯಾಜ್‌ ಅನ್ಸಾರಿ, ಹೈದರ್‌ ಆಲಿ, ಮುಜೀಬ್‌ ಉಲ್ಲಾ, ಉಮೈರ್‌ ಸಿದ್ದಿಕಿ ಮತ್ತು ಅಜರುದ್ದೀನ್‌ ಖುರೇಷಿಗೆ ಎನ್‌ಐಎ ವಿಶೇಷ ನ್ಯಾಯಾಧೀಶರು ತಲಾ ₹50 ಸಾವಿರ ದಂಡವನ್ನೂ ವಿಧಿಸಿದ್ದಾರೆ.

ಪ್ರಕರಣದ ಇನ್ನೊಬ್ಬ ಬಾಲಾರೋಪಿ ತೌಫೀಕ್‌ ಅಹ್ಮದ್‌ ಕೂಡ ತಪ್ಪಿತಸ್ಥ ಎಂದು ಬಾಲ ನ್ಯಾಯಮಂಡಳಿ ತೀರ್ಪು ನೀಡಿತ್ತು. ಆತನನ್ನು ಮೂರು ವರ್ಷಗಳಿಗೆ ಬಾಲಗೃಹಕ್ಕೆ ಕಳುಹಿಸಲಾಗಿದೆ.

ADVERTISEMENT

ಈ ಆರೂ ಮಂದಿ ಪಟ್ನಾ ಸ್ಫೋಟ ಪ್ರಕರಣದಲ್ಲಿಯೂ ತನಿಖೆ ಎದುರಿಸುತ್ತಿದ್ದಾರೆ. 2013ರ ಅಕ್ಟೋಬರ್‌ನಲ್ಲಿ ಪಟ್ನಾದ ಗಾಂಧಿ ಮೈದಾನದಲ್ಲಿ ಸರಣಿ ಸ್ಫೋಟ ನಡೆದಿತ್ತು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪ್ರಚಾರ ಸಭೆಯೊಂದು ನಡೆಯುತ್ತಿದ್ದಾಗಲೇ ಈ ಸ್ಫೋಟ ಸಂಭವಿಸಿತ್ತು. 

‘ಭಾರಿ ಸಾವು ನೋವು ಉಂಟು ಮಾಡುವುದು ತಪ್ಪಿತಸ್ಥರ ಉದ್ದೇಶವಾಗಿತ್ತು. ಹಾಗಾಗಿ ಅವರಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂಬ ನಮ್ಮ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲಲನ್‌ ಕುಮಾರ್‌ ಸಿನ್ಹಾ ಹೇಳಿದ್ದಾರೆ.

‘ನನ್ನ ಕಕ್ಷಿದಾರರು ಚಿಕ್ಕ ವಯಸ್ಸಿನವರು. ಅಪಕ್ವ ಮತ್ತು ಗೊಂದಲದ ಮನಸ್ಥಿತಿಯಿಂದಾಗಿ ಅವರು ಕೃತ್ಯ ಎಸಗಿದ್ದಾರೆ. ವಿಚಾರಣೆಯ ಅವಧಿಯುದ್ದಕ್ಕೂ ಅವರು ಉತ್ತಮ ನಡತೆ ತೋರಿದ್ದಾರೆ. ಹಾಗಾಗಿ ಅವರಿಗೆ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದೆ. ಇದನ್ನು ನ್ಯಾಯಾಲಯ ನಿರ್ಲಕ್ಷಿಸಿದೆ’ ಎಂದು ತಪ್ಪಿತಸ್ಥರ ಪರ ವಕೀಲ ಸೂರ್ಯ ಪ್ರಕಾಶ್‌ ಸಿಂಗ್‌ ಹೇಳಿದ್ದಾರೆ.

‘ತನಿಖೆಯಲ್ಲಿ ಹಲವು ಲೋಪಗಳಾಗಿವೆ. ನಾಲ್ಕು–ಐದು ವಿದೇಶಿಯರು ದೇವಾಲಯದ ಆವರಣಕ್ಕೆ ಬಂದದ್ದನ್ನು ಕಂಡಿದ್ದೇನೆ ಎಂದು ದೇವಾಲಯದ ಆವರಣದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಈ ವಿದೇಶಿಯರನ್ನು ಗುರುತಿಸಬಲ್ಲೆ ಎಂದೂ ಅವರು ಹೇಳಿದ್ದರು. ಆದರೆ, ಈ ವಿದೇಶಿಯರನ್ನು ಪತ್ತೆ ಮಾಡುವ ಕೆಲಸವನ್ನು ತನಿಖಾ ಸಂಸ್ಥೆ ಮಾಡಿಲ್ಲ’ ಎಂದು ಸಿಂಗ್‌ ದೂರಿದ್ದಾರೆ.

ಬೌದ್ಧ ಕ್ಷೇತ್ರದಲ್ಲಿ ಹಿಂಸೆ

ಜಗತ್ಪ್ರಸಿದ್ಧ ಬೌದ್ಧ ಕ್ಷೇತ್ರವಾದ ಬೋಧ ಗಯಾದಲ್ಲಿ 2013ರ ಜುಲೈ 7ರಂದು ಸರಣಿ ಸ್ಫೋಟ ನಡೆಸಲಾಗಿತ್ತು. ಬಿಕ್ಕುಗಳು ಸೇರಿ ಹಲವು ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್‌ ಸಾವು ಸಂಭವಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.