ADVERTISEMENT

ಭಾರತಕ್ಕೂ ‘ಜಿಕಾ’ ವೈರಸ್‌ ಭೀತಿ

ನಿಗಾ ಇಡಲು ಕೇಂದ್ರ ಸಚಿವ ನಡ್ಡಾ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 10:27 IST
Last Updated 29 ಜನವರಿ 2016, 10:27 IST
ಭಾರತಕ್ಕೂ ‘ಜಿಕಾ’ ವೈರಸ್‌ ಭೀತಿ
ಭಾರತಕ್ಕೂ ‘ಜಿಕಾ’ ವೈರಸ್‌ ಭೀತಿ   

ಜಿನಿವಾ, ನ್ಯೂಯಾರ್ಕ್(ಪಿಟಿಐ): ಚಿಕೂನ್ ಗುನ್ಯಾ ಮತ್ತು ಡೆಂಗಿ ಹರಡುವ ಈಡೀಸ್ ಇಜಿಪ್ತಿ ವೈರಸ್‌ನ ಸಂಬಂಧಿ ಎಂದೇ ಗುರುತಿಸಲಾಗಿರುವ ಮಾರಕ ‘ಜಿಕಾ’ ವೈರಸ್ ಅಮೆರಿಕಾ, ಬ್ರೆಜಿಲ್‌, ಸೇರಿದಂತೆ 22 ರಾಷ್ಟ್ರಗಳಿಗೆ ಹರಡಿದ್ದು, ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ನಿಗಾ ಇಡಲು ಸೂಚನೆ(ನವದೆಹಲಿ ವರದಿ): ‘ಜಿಕಾ’ ವೈರಸ್ ಹರಡುತ್ತಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವೈರಸ್‌ ಹರಡುವಿಕೆ ಮೇಲೆ ನಿಗಾ ವಹಿಸಲು ತಜ್ಞರ ತಂಡ ರಚಿಸುವುದಾಗಿ ಹೇಳಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಾಡ್ಡಾ ಅವರು ಉನ್ನತಮಟ್ಟದ ಸಭೆ ನಡೆಸಿದ್ದು, ವಿವಿಧ ದೇಶಗಳಲ್ಲಿ ‘ಜಿಕಾ’ ಹರಡುತ್ತಿರುವ ಬಗ್ಗೆ ಚರ್ಚೆ ನಡೆಸಿ ದೇಶದಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇಡುವುದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

‘ಜಿಕಾ’ ಹರಡಬಲ್ಲ ಈಡೀಸ್ ಇಜಿಪ್ತಿ ಸೊಳ್ಳೆಯು ಶುದ್ಧ ನೀರಿನಲ್ಲೂ ಸಂತಾನೋತ್ಪತ್ತಿ ಮಾಡುತ್ತದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ತಮ್ಮ ಜವಾಬ್ದಾರಿ ಹಾಗೂ ಪಾತ್ರ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.

ಕೊಲಂಬಿಯಾ ಮತ್ತು ಇಕ್ವಿಡಾರ್ ದೇಶಗಳು ವೈರಸ್ ಭೀತಿ ಹಿನ್ನೆಲೆಯಲ್ಲಿ 2018ರ ವರೆಗೆ ಗರ್ಭಧರಿಸದಂತೆ ಮಹಿಳೆಯರಿಗೆ ಮುನ್ನೆಚ್ಚರಿಕೆ ನೀಡಿವೆ.

ಫ್ರಾನ್ಸ್‌ನಲ್ಲಿ ಐವರಿಗೆ ‘ಜಿಕಾ’(ಪ್ಯಾರಿಸ್ ವರದಿ): ವಿದೇಶ ಪ್ರವಾಸ ಕೈಗೊಂಡಿದ್ದ ರಾಷ್ಟ್ರದ ಐವರಿಗೆ ‘ಜಿಕಾ’ ವೈರಸ್ ಸೋಂಕು ತಗುಲಿದೆ ಎಂದು ಫ್ರಾನ್ಸ್‌ನ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.