ADVERTISEMENT

ಭೂ ತಾಪಮಾನ ಏರಿಕೆಯಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಳ:ಕೊಚ್ಚಿ, ಮುಂಬೈಗಳಲ್ಲಿ ಭಾರಿ ನಷ್ಟ ಅಂದಾಜು

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST

ನವದೆಹಲಿ (ಪಿಟಿಐ): ಭೂ ತಾಪಮಾನ ಏರಿಕೆಯಿಂದಾಗುವ ಸಮುದ್ರದ ನೀರಿನ ಮಟ್ಟ ಹೆಚ್ಚಳದಿಂದಾಗಿ ಕೇರಳದ ಪ್ರಶಾಂತ ತಾಣಗಳಾದ ಹಸಿರು ಹಿನ್ನೀರಿನ ಪ್ರದೇಶಗಳು, ಮುಂಬೈ ಸೇರಿದಂತೆ ರಾಷ್ಟ್ರದ ಹಲವು ಕಡೆಗಳಲ್ಲಿ ಭಾರಿ ಹಾನಿಯಾಗುವ ಅಂದಾಜಿದೆ.

ಗಂಗಾ, ಕೃಷ್ಣಾ, ಗೋದಾವರಿ, ಕಾವೇರಿ ನದಿಗಳ ನದಿ ಮುಖಜ ಭೂಮಿ ಹಾಗೂ ಪೂರ್ವ ಕರಾವಳಿಯ ಮಹಾನದಿ ಪಾತ್ರದ ನದಿ ಮುಖಜ ಭೂಮಿಗೆ ಕೂಡ ಅಪಾಯವಿದೆ. ಈ ಪ್ರದೇಶಗಳ ನೀರಾವರಿ ಪ್ರದೇಶಗಳ ಜತೆಗೆ ಆಸುಪಾಸಿನ ಜನವಸತಿ ಪ್ರದೇಶಗಳಿಗೂ ತೊಂದರೆಯಾಗುವ ಸಂಭವವಿದೆ ಎಂದು ಸರ್ಕಾರ ವಿಶ್ವಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ದಾಖಲಿಸಲಾಗಿದೆ.

1990ರಿಂದ 2100ರವರೆಗಿನ ಅವಧಿಯಲ್ಲಿ ಸಮುದ್ರದ ನೀರಿನ ಮಟ್ಟ 3.5ರಿಂದ 34.6 ಇಂಚುಗಳಷ್ಟು ಹೆಚ್ಚಾಗುವ ಅಂದಾಜಿದೆ. ಹೀಗೆ ಸಮುದ್ರದ ಮಟ್ಟ ಹೆಚ್ಚಾದರೆ ಕರಾವಳಿ ತೀರದ ಅಂತರ್ಜಲದಲ್ಲಿ ಲವಣಾಂಶ ಅಧಿಕವಾಗುವ ಜತೆಗೆ, ತರಿ ಜಮೀನು (ಗದ್ದೆ ಬಯಲುಗಳು) ಅಳಿವಿನ ಅಂಚು ಸೇರಲಿವೆ. ಬೆಲೆಬಾಳುವ ಭೂಮಿ ನೀರಿನಿಂದ ಆವೃತವಾಗಿ, ಕರಾವಳಿ ಸಮುದಾಯಗಳಿಗೆ ವ್ಯಾಪಕ ನಷ್ಟವಾಗಲಿದೆ.

ಪಶ್ಚಿಮ ಕರಾವಳಿಯಲ್ಲಿ ಗುಜರಾತ್‌ನ ಖಂಬತ್ ಮತ್ತು ಕಛ್ ವಲಯಗಳು, ಮುಂಬೈ, ಕೊಂಕಣ ಕರಾವಳಿಯ ಕೆಲವು ಭಾಗ ಮತ್ತು ದಕ್ಷಿಣ ಕೇರಳಗಳಲ್ಲಿ ಅತಿ ಹೆಚ್ಚಿನ ನಷ್ಟ ಸಂಭವಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನೀತಿನಿರೂಪಣಾ ಸಮಾವೇಶಕ್ಕೆ ಭಾರತ ಸಲ್ಲಿಸುತ್ತಿರುವ ಎರಡನೇ ಅಧಿಕೃತ ವರದಿ ಇದಾಗಿದೆ.

ವಿವಿಧ ವಿಭಾಗಗಳಿಗೆ ಸೇರಿದ, 120 ಬೇರೆ ಬೇರೆ ಸಂಸ್ಥೆಗಳ 220 ವಿಜ್ಞಾನಿಗಳು ಸೇರಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ. ಸಮುದ್ರ ಮಟ್ಟ ಏರಿಕೆಯಿಂದ ಆರ್ಥಿಕ ಚಟುವಟಿಕೆಯ ಪ್ರಮುಖ ತಾಣಗಳು ಹಾಗೂ ಸಾಂಸ್ಕೃತಿಕ ವಲಯಗಳಿಗೆ ಭಾರಿ ಹಾನಿಯಾಗಬಹುದು ಎಂದು ವರದಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.

2004ರಲ್ಲಿ ಸುನಾಮಿಯಿಂದ ನಲುಗಿದ ತಮಿಳುನಾಡಿನ ನಾಗಪಟ್ಟಣಂ, ಕೊಚ್ಚಿಯ ಹಿನ್ನೀರು ಪ್ರದೇಶಗಳು, ಒಡಿಶಾದ ಪರದೀಪ್ ಮತ್ತಿತರ ಸ್ಥಳಗಳಿಗೆ ತಜ್ಞರು ಖುದ್ದು ಭೇಟಿ ನೀಡಿ ಈ ವರದಿ ಸಿದ್ಧಪಡಿಸಿದ್ದಾರೆ.
ಡಿಜಿಟಲ್ ಎಲಿವೇಶನ್ ಮಾಡೆಲ್ ಡಾಟಾ, ಡಿಜಿಟಲ್ ಇಮೇಜಿಂಗ್ ಪ್ರೊಸೆಸಿಂಗ್, ಜಿಐಎಸ್ ಸಾಫ್ಟ್‌ವೇರ್ ಇತ್ಯಾದಿಗಳನ್ನು ಆಧರಿಸಿ ಈ ನಷ್ಟ ಸಂಭವನೀಯತೆಯನ್ನು ಲೆಕ್ಕ ಹಾಕಲಾಗಿದೆ.

ಮುಖ್ಯಾಂಶಗಳು
*  220 ವಿಜ್ಞಾನಿಗಳು ಸೇರಿ ಈ ವರದಿ ಸಿದ್ಧ
*  ವಿವಿಧ ಸ್ಥಳಗಳಿಗೆ ತಜ್ಞರು ಖುದ್ದು ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.