ADVERTISEMENT

ಭೂ ಹಂಚಿಕೆ ಸಮರ್ಪಕವಾಗಿ ನಡೆದಿದೆ-ಕರುಣಾ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಚೆನ್ನೈ (ಪಿಟಿಐ):  ವಿವೇಚನಾ ಕೋಟಾದಡಿ ನಿವೇಶನ ಮತ್ತು ಫ್ಲ್ಯಾಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ತಮ್ಮ ವಿರುದ್ಧ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಆರೋಪವನ್ನು ನಿರಾಕರಿಸಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಈ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರುವ ಮೂಲಕ ಸ್ವಾಮಿ ಸತ್ಯವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ತಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡುವಂತೆ ಕೋರಿ ಸ್ವಾಮಿ, ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲಾ ಅವರಿಗೆ ಅರ್ಜಿ ಸಲ್ಲಿಸಿರುವ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಕರುಣಾನಿಧಿ, ವಿವೇಚನಾ ಕೋಟಾ ತಮ್ಮ ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ಅದು ಎಐಎಡಿಎಂಕೆ ಅಧಿಕಾರದಲ್ಲಿದ್ದಾಗಲೂ ಚಾಲ್ತಿಯಲ್ಲಿತ್ತು ಎಂದು ಹೇಳಿದರು.

‘ತಮಿಳುನಾಡು ಗೃಹಮಂಡಳಿ (ಟಿಎನ್‌ಬಿಎಚ್) ಶೇ.85ರಷ್ಟು ನಿವೇಶನ ಮತ್ತು ಭೂಮಿಯನ್ನು ತನಗೆ ಬಂದಿದ್ದ ಸಾವಿರಾರು ಅರ್ಜಿಗಳನ್ನು ಡ್ರಾ ಮಾಡುವ ಮೂಲಕ ಹಂಚಿಕೆ ಮಾಡಿತ್ತು. ಉಳಿದ ಶೇ. 15ರಷ್ಟು ವಿವೇಚನಾ ಕೋಟಾಕ್ಕೆ ಮೀಸಲಿಡಲಾಯಿತು. ಅರ್ಜಿದಾರರು ಮತ್ತು ವಿವೇಚನಾ ಕೋಟಾದ ಫಲಾನುಭವಿಗಳಿಗೆ ಫ್ಲ್ಯಾಟ್ ಮತ್ತು ಮನೆಗಳನ್ನು ಮಾರುಕಟ್ಟೆ ಬೆಲೆಗಳಲ್ಲಿಯೇ ಹಂಚಿಕೆ ಮಾಡಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದರು.

‘ಟಿಎನ್‌ಬಿಎಚ್ ಆಗಿನ ಮಾರುಕಟ್ಟೆ ಬೆಲೆ ಮತ್ತು ಉಪನೋಂದಣಿ ಕಚೇರಿಯ ಮಾರ್ಗದರ್ಶನಕ್ಕೆ ಅನುಗುಣವಾಗಿ ಭೂಮಿ ಮತ್ತು ಮನೆಗಳ ಬೆಲೆಯನ್ನು ನಿಗದಿ ಮಾಡಿತ್ತು.  ಆದರೆ ಸ್ವಾಮಿ ಈ ವಿಷಯದಲ್ಲಿ ಸತ್ಯವನ್ನು ತಿರುಚುವ ಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ವಿವೇಚನಾ ಕೋಟಾವನ್ನು 1979ರಲ್ಲಿ ಅಧಿಕಾರದಲ್ಲಿದ್ದಾಗ ಎಐಎಡಿಎಂಕೆ ಅನುಷ್ಠಾನಕ್ಕೆ ತಂದಿತ್ತು. ಆರಂಭದಲ್ಲಿ ಶೇ.10ರಷ್ಟು ಭೂಮಿಯನ್ನು ವಿವೇಚನಾ ಕೋಟಾದಡಿ ಹಂಚಬಹುದಾಗಿತ್ತು. ಇದರ ಪ್ರಮಾಣವನ್ನು ಶೇ.15ಕ್ಕೆ ಏರಿಸಿದ್ದು 1991-96ರ ಅವಧಿಯಲ್ಲಿ ಎಐಎಡಿಎಂಕೆ ಪಕ್ಷವೇ’ ಎಂದು ತಿಳಿಸಿದರು.

‘ಎಐಎಡಿಎಂಕೆ ತನ್ನ ಅಧಿಕಾರಾವಧಿಯಲ್ಲಿ ವಿವೇಚನಾ ಕೋಟಾದಡಿ ಹಂಚಿಕೆ ಮಾಡಿದ ಭೂಮಿಯ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ ಕರುಣಾನಿಧಿ, ಐಪಿಎಸ್ ಅಧಿಕಾರಿಗಳಾದ ಕೆ.ವಿಜಯಕುಮಾರ್ ಮತ್ತು ಆರ್.ನಟರಾಜ್ ಸೇರಿದಂತೆ ಎಐಎಡಿಎಂಕೆ ಪಕ್ಷದ ಮುಖಂಡರಾದ ಡಾ. ಬಾನುಮತಿ, ಎಂ. ತಂಬಿದೊರೈ ಮುಂತಾದವರ ಸಂಬಂಧಿಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.