ADVERTISEMENT

ಮತ್ತೆ ಸಿಬಿಐ ಸುಳಿಯಲ್ಲಿ ಲಾಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಮತ್ತೆ ಸಿಬಿಐ ಸುಳಿಯಲ್ಲಿ ಲಾಲು
ಮತ್ತೆ ಸಿಬಿಐ ಸುಳಿಯಲ್ಲಿ ಲಾಲು   

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮತ್ತು ಅವರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಲಾಲು ಅವರು ರೈಲ್ವೆ ಸಚಿವರಾಗಿದ್ದಾಗ ಎರಡು ಹೋಟೆಲುಗಳನ್ನು ಖಾಸಗಿಯವರಿಗೆ ನೀಡಿದ್ದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಲ್ಲಿ ಲಾಲು, ಅವರ ಹೆಂಡತಿ ರಾಬ್ಡಿದೇವಿ ಮತ್ತು ಮಗ, ಬಿಹಾರ
ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಸಿಬಿಐ ಆರೋಪ ಏನು: ರಾಂಚಿ ಮತ್ತು ಪುರಿಯಲ್ಲಿರುವ ರೈಲ್ವೆಯ ಮಾಲೀಕತ್ವದ ಬಿಎನ್‌ಆರ್‌ ಹೋಟೆಲ್‌ಗಳ ನಿಯಂತ್ರಣವನ್ನು ಹರ್ಷ ಕೊಚಾರ್‌ ಅವರ ಮಾಲೀಕತ್ವದ ಸುಜಾತಾ ಹೋಟೆಲ್‌ ಪ್ರೈ.ಲಿ. (ಎಸ್‌ಎಚ್‌ಪಿಎಲ್‌) ಎಂಬ ಕಂಪೆನಿಗೆ ನೀಡುವುದಕ್ಕಾಗಿ ಲಾಲು ಅವರು ಇತರರ ಜತೆ ಸೇರಿ ಷಡ್ಯಂತ್ರ ಮಾಡಿದ್ದಾರೆ. 

ಹೋಟೆಲುಗಳನ್ನು ಗುತ್ತಿಗೆ ನೀಡಿದ್ದಕ್ಕೆ ಪ್ರತಿಯಾಗಿ ಪಟ್ನಾದಲ್ಲಿ ಮೂರು ಎಕರೆ ಸ್ಥಳ ಪಡೆದುಕೊಂಡಿದ್ದಾರೆ. ಈಗ ₹94 ಕೋಟಿ ಬೆಲೆ ಬಾಳುವ ಸ್ಥಳವನ್ನು ಮೊದಲಿಗೆ ಲಾಲು ಅವರ ಆಪ್ತ ಪ್ರೇಮ್‌ಚಂದ್‌ ಗುಪ್ತಾ ಅವರ ಹೆಂಡತಿ ಸರಳಾ ಅವರು ನಿರ್ದೇಶಕರಾಗಿದ್ದ ಡಿಲೈಟ್‌ ಮಾರ್ಕೆಟಿಂಗ್‌ ಪ್ರೈ.ಲಿ. (ಡಿಎಂಪಿಎಲ್‌) ಸಂಸ್ಥೆಗೆ ₹1.47 ಕೋಟಿಗೆ ನೀಡಲಾಗಿತ್ತು. ಈ ಮೊತ್ತವನ್ನು ರಹಸ್ಯವಾಗಿ ಷೇರುಗಳ ರೂಪದಲ್ಲಿ ಪಾವತಿ ಮಾಡಲಾಗಿತ್ತು.

ಈ ಮಾರಾಟ 2005ರ ಫೆಬ್ರುವರಿ 5ರಂದು ನಡೆಯಿತು. ಪುರಿ ಮತ್ತು ರಾಂಚಿಯ ಹೋಟೆಲುಗಳನ್ನು ಕೊಚಾರ್‌ ಅವರಿಗೆ 15 ವರ್ಷ ಅವಧಿಗೆ ಗುತ್ತಿಗೆಗೆ ನಿರ್ಧಾರವನ್ನೂ ಅದೇ ದಿನ ಕೈಗೊಳ್ಳಲಾಗಿದೆ.

ಲಾಲು ಅವರು ಸಚಿವ ಹುದ್ದೆಯಿಂದ ಇಳಿದ ಬಳಿಕ 2010ರಿಂದ 14ರ ಅವಧಿಯಲ್ಲಿ ರಾಬ್ಡಿ ದೇವಿ ಮತ್ತು ತೇಜಸ್ವಿ ಅವರ ಮಾಲೀಕತ್ವದ ಲಾರಾ ಪ್ರೋಜೆಕ್ಟ್ಸ್‌ಗೆ ಡಿಎಂಪಿಎಲ್‌ ಷೇರುಗಳನ್ನು ವರ್ಗಾಯಿಸಿತು. ₹32.5 ಕೋಟಿ ಮೌಲ್ಯದ ಡಿಎಂಸಿಎಲ್‌ ಕಂಪೆನಿಯ ಷೇರುಗಳನ್ನು ಕೇವಲ ₹64 ಲಕ್ಷಕ್ಕೆ ಲಾರಾ ಪ್ರೋಜೆಕ್ಟ್ಸ್‌ಗೆ ನೀಡಲಾಗಿದೆ. 

ಟೆಂಡರ್‌ನಲ್ಲೇ ಅಕ್ರಮ: ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ತಿರುಚಲಾಗಿದೆ ಮತ್ತು ಖಾಸಗಿ ಕಂಪೆನಿಗೆ ನೆರವಾಗುವುದಕ್ಕಾಗಿ ಷರತ್ತುಗಳನ್ನು ಬದಲಾಯಿಸಲಾಗಿದೆ ಎಂಬುದು ಸಿಬಿಐನ ಇನ್ನೊಂದು ಆರೋಪ.

ಹೋಟೆಲುಗಳನ್ನು ಗುತ್ತಿಗೆ ನೀಡುವುದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಟೆಂಡರ್‌ ಆಹ್ವಾನ ಪತ್ರಕ್ಕೆ ‘ದಾರಿ ತಪ್ಪಿಸುವ’ ತಿದ್ದುಪಡಿಗಳನ್ನು ಸೇರಿಸಿ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಲಾಗಿತ್ತು.

ರಾಂಚಿಯ ಹೋಟೆಲ್‌ಗೆ 15 ಕಂಪೆನಿಗಳಿಂದ ಬಿಡ್‌ ಸಲ್ಲಿಕೆಯಾಗಿತ್ತು. ಆದರೆ ಸುಜಾತಾ ಹೋಟೆಲ್ಸ್‌ ಮತ್ತು ದೀನಾನಾಥ ಹೋಟೆಲ್ಸ್‌ನ ಬಿಡ್‌ ವಿವರಗಳು ಮಾತ್ರ ಐಆರ್‌ಸಿಟಿಸಿಯಲ್ಲಿ ಲಭ್ಯ ಇವೆ. ಆದರೆ ದೀನಾನಾಥ ಹೋಟೆಲ್ಸ್‌ ಸಲ್ಲಿಸಿದ ಬಿಡ್‌ ಪತ್ರಗಳೂ ಲಭ್ಯ ಇಲ್ಲ.

ಪುರಿಯ ಹೋಟೆಲ್‌ಗೆ ಸಂಬಂಧಿಸಿ  ಮೆ. ಹೋಟೆಲ್‌ ಕೇಸರಿ ಸಂಸ್ಥೆಯ ಬಿಡ್‌ಗಳಿಗೆ ತಾಂತ್ರಿಕ ಮೌಲ್ಯಮಾಪನದಲ್ಲಿ ಉದ್ದೇಶಪೂರ್ವಕವಾಗಿ ಮತ್ತು ಯಾವುದೇ ಕಾರಣವಿಲ್ಲದೆ ಕಡಿಮೆ ಅಂಕಗಳನ್ನು ನೀಡಲಾಗಿತ್ತು. ಹಾಗಾಗಿ ಈ ಸಂಸ್ಥೆಯು ಹಣಕಾಸು ಬಿಡ್‌ ತೆರೆಯುವುದಕ್ಕೆ ಅರ್ಹತೆಯನ್ನೇ ಪಡೆಯಲಿಲ್ಲ. ಕೊನೆಗೆ ಸುಜಾತಾ ಹೋಟೆಲ್ಸ್‌ ಮಾತ್ರ ಅರ್ಹತೆ ಪಡೆಯಿತು.

12 ಕಡೆ ದಾಳಿ: ಈ ಪ್ರಕರಣ ಬುಧವಾರವೇ ದಾಖಲಾಗಿದೆ. ಆದರೆ ಪಟ್ನಾ, ದೆಹಲಿ, ರಾಂಚಿ (ಜಾರ್ಖಂಡ್‌), ಪುರಿ (ಒಡಿಶಾ) ಮತ್ತು ಗುರುಗ್ರಾಮಗಳ (ಹರಿಯಾಣ) 12 ಸ್ಥಳಗಳ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿದ್ದರಿಂದಾಗಿ ಪ್ರಕರಣ ಬಹಿರಂಗವಾಗಿದೆ.

ಸಿಬಿಐ ದಾಳಿಗೆ ಆರ್‌ಎಸ್ಎಸ್, ಬಿಜಿಪಿ ಪಿತೂರಿ – ಲಾಲು ಆಪಾದನೆ: ಸಿಬಿಐ ಅಧಿಕಾರಿಗಳು ತಮ್ಮ ಮನೆಯ ಮೇಲೆ ದಾಳಿ ಮಾಡಲು ಬಿಜೆಪಿ ಮತ್ತು ಆರ್ಎಸ್ಎಸ್ ಕುಮ್ಮಕ್ಕೇ ಕಾರಣ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಆಪಾದಿಸಿದರು. ಆದರೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು ಅವರು ಈ ಆಪಾದನೆಯನ್ನು ತಳ್ಳಿಹಾಕಿದ್ದಾರೆ.

ಲಾಲು ಪ್ರಸಾದ್ ನಿವಾಸದ ಮೇಲೆ ನಡೆದ ಸಿಬಿಐ ದಾಳಿಯಲ್ಲಿ ಕೇಂದ್ರ ಸರ್ಕಾರದ ಮತ್ತು ಬಿಜೆಪಿಯ ಪಾತ್ರವಿಲ್ಲ ಎಂದು ನಾಯ್ಡು ಸ್ಪಷ್ಟಪಡಿಸಿದ್ದಾರೆ.

‘ಯಾವುದೇ ತಪ್ಪು ಮಾಡದಿದ್ದರೂ ಸಿಬಿಐ ದಾಳಿ ಮಾಡಿಸಿ ಕಿರುಕುಳ ನೀಡಲಾಗುತ್ತಿದೆ, ಇದಕ್ಕೆ ಆರ್‌ಎಸ್ಎಸ್ ಮತ್ತು ಬಿಜೆಪಿಯ ಪಿತೂರಿಯೇ ಕಾರಣ’ ಎಂದು ಲಾಲು ಆಪಾದಿಸಿದರು.

‘ಇದರಲ್ಲಿ ರಾಜಕೀಯ ದ್ವೇಷವೇನಿದೆ?:  ಸಿಬಿಐ ಕಾನೂನಿನ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಬಿಐ ಕೆಲಸದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡದ ಕಾರಣ ಆ ಸಂಸ್ಥೆಯು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ನಾಯ್ಡು ತಿರುಗೇಟು ನೀಡಿದ್ದಾರೆ.

ಲಾಲೂ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿವೆ. ಈಗ ಸಿಬಿಐ ದಾಳಿ ನಡೆದಿರುವುದು, ಅದರಲ್ಲೂ ಲಾಲು ಅವರು ವಿರೋಧ ಪಕ್ಷಗಳ ಬೃಹತ್ ರ್‍್ಯಾಲಿ ನಡೆಸುತ್ತಿರುವ ಸಂದರ್ಭದಲ್ಲಿ ದಾಳಿ ನಡೆದಿರುವುದು ಅವರಿಗೆ ಕಿರಿಕಿರಿ ಉಂಟುಮಾಡಿದೆ.

2004ರಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಈಗ ದಾಳಿ ಮಾಡಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯ ಉಂಟು ಮಾಡಿದೆ. ಕಾಂಗ್ರೆಸ್ ಈ ಕ್ರಮವನ್ನು ಪ್ರಶ್ನಿಸಿದ್ದು, ರಾಜಕೀಯ ದ್ವೇಷಕ್ಕಾಗಿಯೇ  ಸಿಬಿಐ ದಾಳಿ ನಡೆದಿರಬಹುದು ಎಂದು ಹೇಳಿದೆ.
*
ಲಾಲೂ ಬೆಂಬಿಡದ ಅಸ್ಥಾನಾ
ಪಟ್ನಾ:
ದಶಕದ ಹಿಂದೆ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಅವರ ವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಯೇ ಶುಕ್ರವಾರ ನಡೆದ ದಾಳಿಯ ನೇತೃತ್ವ ವಹಿಸಿದ್ದಾರೆ.

1996ರಲ್ಲಿ ಮೇವು ಹಗರಣ ಬಹಿರಂಗವಾದಾಗ ಸಿಬಿಐ ಎಸ್‌ಪಿ ಆಗಿದ್ದ ರಾಕೇಶ್ ಅಸ್ಥಾನಾ ಅವರು ಬಿಹಾರದ   ಮುಖ್ಯಮಂತ್ರಿ ಆಗಿದ್ದ ಲಾಲು ಅವರನ್ನು ಆರು ತಾಸು ವಿಚಾರಣೆ ನಡೆಸಿದ್ದರು. ಈ ವಿಚಾರಣೆಯ ಆಧಾರದ ಮೇಲೆ 1997ರ ಜುಲೈಯಲ್ಲಿ ಲಾಲು ಅವರನ್ನು ಬಂಧಿಸಲಾಗಿತ್ತು. ಅಸ್ಥಾನಾ ಅವರು ಈಗ ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಾಲು, ಅವರ ಪತ್ನಿ ರಾಬ್ಡಿದೇವಿ ಮತ್ತು ಮಗ ತೇಜಸ್ ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ದಾಳಿಯ ನೇತೃತ್ವವನ್ನು ಅಸ್ಥಾನಾ ಅವರೇ ವಹಿಸಿದ್ದಾರೆ.

1984ನೇ ಸಾಲಿನ ಐಪಿಎಸ್ ಅಧಿಕಾರಿ ಆಗಿರುವ ಅಸ್ಥಾನಾ ಅವರು ಪುರುಲಿಯಾ ಶಸ್ತ್ರಾಸ್ತ್ರ ಬೀಳಿಸಿದ ಪ್ರಕರಣದ ತನಿಖೆ ನಡೆಸುವ ಮೂಲಕ ಖ್ಯಾತಿಗೆ ಬಂದಿದ್ದಾರೆ. ನಂತರ ಲಾಲು ವಿಚಾರಣೆ  ಮತ್ತು ಬಂಧನದಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಗೋಧ್ರಾ ಹತ್ಯಾಕಾಂಡ, ಅಹಮದಾಬಾದ್ ಸ್ಫೋಟ ಪ್ರಕರಣದ ತನಿಖೆಯನ್ನೂ ಅಸ್ಥಾನಾ ನಡೆಸಿದ್ದಾರೆ.

2016ರಲ್ಲಿ ಅನಿಲ್ ಕುಮಾರ್ ಸಿನ್ಹಾ ಅವರು ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಿದ ನಂತರ ಅಸ್ಥಾನಾ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಹೆಚ್ಚುವರಿ ನಿರ್ದೇಶಕರಾಗಿ ಸಿಬಿಐನ ಎರಡನೇ ಹಿರಿಯ ಅಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೈತ್ರಿ ಮೇಲೆ ಕಾರ್ಮೋಡ
ತೇಜಸ್ವಿ ವಿರುದ್ಧ ದೂರು ದಾಖಲಾಗಿರುವುದರಿಂದ ಬಿಹಾರದ ಆಡಳಿತಾರೂಢ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮಹಾಮೈತ್ರಿ ಮುಂದುವರಿಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಿರ್ಧಾರದ ಮೇಲೆ ಮಹಾಮೈತ್ರಿಯ ಭವಿಷ್ಯ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT