ADVERTISEMENT

ಮದುವೆ ಉಡುಗೊರೆ ಸ್ಫೋಟ: ವರ, ಅಜ್ಜಿ ಸಾವು

ಪಿಟಿಐ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಸಾಹು ದಂಪತಿ
ಸಾಹು ದಂಪತಿ   

ಒಡಿಶಾ : ‘ಮದುವೆ ಆರತಕ್ಷತೆಯಲ್ಲಿ ನೀಡಿದ್ದ ಉಡುಗೊರೆಯನ್ನು ಐದು ದಿನಗಳ ನಂತರ ತೆರೆದು ನೋಡಿದ ವೇಳೆ ಅದು ಸ್ಫೋಟಗೊಂಡು ವರ ಮತ್ತು ಆತನ ಅಜ್ಜಿ ಸಾವನ್ನಪ್ಪಿದ ಪ್ರಕರಣ ಒಡಿಶಾದ ಬೊಲಾಂಗಿರ್‌ ಜಿಲ್ಲೆಯಲ್ಲಿ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಪಟ್ನಾಗಡದ ನಿವಾಸಿ ಸೌಮ್ಯಶೇಖರ್‌ ಸಾಹು–ರೀಮಾ ಸಾಹು ಅವರ ವಿವಾಹ ಫೆ.18ರಂದು ನಡೆದಿತ್ತು. ಇದಾದ ಎರಡು ದಿನಗಳ ಬಳಿಕ ಆರತಕ್ಷತೆ ಕಾರ್ಯಕ್ರಮ ನೆರವೇರಿತ್ತು. ಈ ವೇಳೆ ಅನಾಮಿಕ ವ್ಯಕ್ತಿಗಳು ಉಡುಗೊರೆಯನ್ನು ನೀಡಿದ್ದರು. ಅದನ್ನು ಮನೆಯಲ್ಲಿ ತೆರೆದು ನೋಡಿದ ವೇಳೆ ಸ್ಫೋಟಗೊಂಡಿದೆ. ಈ ವೇಳೆ ವರನ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

‘ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ರೂರ್ಕೆಲಾದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ, ಶುಕ್ರವಾರ ರಾತ್ರಿ ಶೇಖರ್‌ಸಾಹು ಸಾವನ್ನಪ್ಪಿದ್ದಾರೆ. ವಧು ರೀಮಾ ಸಾಹು ಅವರಿಗೆ ಬರ್ಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

‘ಈಗಾಗಲೇ ಸಾಕ್ಷಿಗಳನ್ನು ಕಲೆಹಾಕಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಉಡುಗೊರೆ ನೀಡಿದ ವ್ಯಕ್ತಿಯನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸುತ್ತೇವೆ’ ಎಂದು ಪಟ್ನಾಗಡದ ಹಿರಿಯ ಪೊಲೀಸ್‌ ಅಧಿಕಾರಿ ಶೇಷದೇವ ಬರಿಹಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.