ನವದೆಹಲಿ (ಪಿಟಿಐ): ಮನರಂಜನೆ ಹೆಸರಿನಲ್ಲಿ ಟಿವಿ ಚಾನೆಲ್‌ಗಳು, ಪ್ರಾಣಿಗಳ ಶೋಷಣೆ ನಡೆಸುತ್ತಿವೆ ಎಂದು ಹೇಳಿರುವ ಟಿವಿ ಪ್ರಸಾರ ವಿಷಯಗಳಿಗೆ ಸಂಬಂಧಿಸಿದ ದೂರುಗಳ ಮಂಡಳಿ, (ಬಿಸಿಸಿಸಿ) ಪ್ರೇಕ್ಷಕರಲ್ಲಿ ತಪ್ಪು ಕಲ್ಪನೆ ಬೀರುವ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಚಾನೆಲ್‌ಗಳಿಗೆ ಸೂಚಿಸಿದೆ.
ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಷಾ ನೇತೃತ್ವದ, ಸುದ್ದಿಯೇತರ ಟಿವಿ ಚಾನೆಲ್‌ಗಳ ಸ್ವಯಂ ನಿಯಂತ್ರಣ ಸಂಸ್ಥೆಯಾಗಿರುವ ಬಿಸಿಸಿಸಿಯು ಕಾರ್ಯಕ್ರಮ ಪ್ರಸಾರ ಮಾಡುವ ಸಂದರ್ಭದಲ್ಲಿ ಚಾನೆಲ್‌ಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆಗಳ ಪಟ್ಟಿ ಸಿದ್ಧಪಡಿಸಿದೆ.
ಮನರಂಜನಾ ಚಾನೆಲ್‌ಗಳು, ಅದರಲ್ಲೂ ರಿಯಾಲಿಟಿ ಶೋಗಳನ್ನು ನಡೆಸುತ್ತಿರುವ ಚಾನೆಲ್‌ಗಳು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳು ಪ್ರಾಣಿಗಳಿಗೆ ಅಪಾಯಕಾರಿಯಾಗಿವೆ ಎಂದು ಬಿಸಿಸಿಸಿ ಹೇಳಿದೆ.
`ಉದಾಹರಣೆಗೆ, ರಿಯಾಲಿಟಿ ಶೋಗಳಲ್ಲಿ ತಮಗಿರುವ ಧೈರ್ಯ /ಸಾಹಸ ಪ್ರದರ್ಶಿಸಲು ಸ್ಪರ್ಧಿಗಳು ಜೀವಂತ ಕೀಟಗಳನ್ನು ತಿನ್ನುತ್ತಾರೆ. ಇದು ನೋಡಲು ಅಸಹ್ಯಕರವಾಗಿರುವುದಲ್ಲದೇ ಆರೋಗ್ಯಕ್ಕೂ ಅಪಾಯಕಾರಿ.
ಇನ್ನು ಕೆಲವು ಚಾನೆಲ್‌ಗಳಲ್ಲಿ ಪ್ರತಿ ವಾರ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಕೆಚ್ಚನ್ನು ಪ್ರದರ್ಶಿಸಲು ಸ್ಪರ್ಧಿಗಳು ಕುರಿಯ ಕಣ್ಣು ಗುಡ್ಡೆ, ಹುಳುಗಳನ್ನು ತಿನ್ನುತ್ತಾರೆ~ ಎಂದು ಮಂಡಳಿ ಹೇಳಿದೆ.ಸಂಸದೆ ಮನೇಕಾ ಗಾಂಧಿ ಅವರನ್ನು ಸಂಪರ್ಕಿಸಿ ಈ ಸಲಹಾ ಪಟ್ಟಿಯನ್ನು ಬಿಸಿಸಿಸಿ ಸಿದ್ಧಪಡಿಸಿದೆ.
ವಯಸ್ಕರ ಹಾಸ್ಯ ಕಾರ್ಯಕ್ರಮ-ರಾತ್ರಿ 11ರ ನಂತರ ಪ್ರಸಾರ ಮಾಡಲು ಸೂಚನೆ: ಈ ಮಧ್ಯೆ, ದ್ವಂದ್ವಾರ್ಥವಿರುವ ಹಾಸ್ಯ ಸಂಭಾಷಣೆ ಮತ್ತು ವಯಸ್ಕರ ಹಾಸ್ಯ ಒಳಗೊಂಡ ಚಲನಚಿತ್ರ ಪ್ರಶಸ್ತಿ ಸಮಾರಂಭದಂತಹ ಕಾರ್ಯಕ್ರಮಗಳನ್ನು ರಾತ್ರಿ 11ರ ನಂತರ ಪ್ರಸಾರ ಮಾಡುವಂತೆಯೂ ಬಿಸಿಸಿಸಿ ಟಿವಿ ಚಾನೆಲ್‌ಗಳಿಗೆ ಸೂಚಿಸಿದೆ.
ಸಾರ್ವಜನಿಕರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಿಸಿಸಿಸಿ ಈ ನಿರ್ದೇಶನ ನೀಡಿದೆ. ಕೆಲವು ಚಾನೆಲ್‌ಗಳು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳು, ಮಹಿಳೆಯರಿಗೆ ಮತ್ತು ಕೆಲವು ಸಮುದಾಯಕ್ಕೆ ಅಗೌರವ ತೋರುತ್ತಿರುವುದು ಜನರಿಂದ ಬಂದಿರುವ ದೂರುಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ಬಿಸಿಸಿಸಿ ಹೇಳಿದೆ.ಬಿಸಿಸಿಸಿ ವ್ಯಾಪ್ತಿಯಲ್ಲಿ ದೇಶದ 235 ಸುದ್ದಿಯೇತರ ಚಾನೆಲ್‌ಗಳು ಬರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.