ಕೋಲ್ಕೋತ್ತಾ (ಪಿಟಿಐ): ಪ್ರಯಾಣಿಕರ ಟಿಕೆಟ್ ದರವನ್ನು ಏರಿಸಿದ ಕಾರಣಕ್ಕೆ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರಿಂದ ತೃಣಮೂಲ ಕಾಂಗ್ರೆಸ್ ರಾಜೀನಾಮೆ ಕೇಳಿದೆ. ಆದರೆ ತ್ರಿವೇದಿ ಅವರು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರೇ ಖುದ್ದು ಲಿಖಿತವಾಗಿ ಸೂಚಿಸಿದರಷ್ಟೆ ತಾವು ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ ಬ್ಯಾನರ್ಜಿ ಅವರು ತ್ರಿವೇದಿ ಅವರಿಗೆ ದೂರವಾಣಿ ಕರೆ ಮಾಡಿ ಗೌರವಯುತವಾಗಿ ರಾಜೀನಾಮೆ ನೀಡಬೇಕು ಆ ಮೂಲಕ ಸಂಪುಟದಿಂದ ಕೈಬಿಡುವ ಮುಜುಗರದಿಂದ ದೂರ ಉಳಿಯಿರಿ ಎಂದು ಸೂಚಿಸಿದ್ದಾರೆ. ಆದರೆ ತ್ರಿವೇದಿ ಅವರು ಮಮತಾ ಅವರೇ ಲಿಖಿತವಾಗಿ ಸೂಚಿಸಿದರಷ್ಟೆ ತಾವು ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಲ್ಯಾಣ ಬ್ಯಾನರ್ಜಿ ಅವರು ರಾಜೀನಾಮೆ ನೀಡಿ ಎಂದರೆ ಅತ್ತ ತೃಣಮೂಲ ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕ ಸುದೀಪ್ ಬಂದೋಪದ್ಯಾಯ ಅವರು ಪಕ್ಷವು ತನ್ನಿಂದ ರಾಜೀನಾಮೆ ಬಯಸಿಲ್ಲ ಎಂದಿದ್ದಾರೆ. ಇದರಿಂದ ತಮಗೆ ಗೊಂದಲ ಮೂಡಿದ್ದು, ಸ್ವತ: ಮಮತಾ ಬ್ಯಾನರ್ಜಿ ಅವರೇ ಲಿಖಿತವಾಗಿ ತಿಳಿಸಿದರೆ ತಾವು ರಾಜೀನಾಮೆ ನೀಡಲು ಸಿದ್ದ ಎಂದು ಸುದ್ದಿಸಂಸ್ಥೆಗೆ ತ್ರಿವೇದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.