ADVERTISEMENT

ಮರಳಿದ ಶಾಂತಿ: ಉಪವಾಸ ಕೈಬಿಟ್ಟ ಶಿವರಾಜ್‌ಸಿಂಗ್‌

ಪಿಟಿಐ
Published 11 ಜೂನ್ 2017, 19:32 IST
Last Updated 11 ಜೂನ್ 2017, 19:32 IST
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಭಾನುವಾರ ಎಳನೀರು ಸೇವಿಸಿ ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸಿದರು    -ಪಿಟಿಐ ಚಿತ್ರ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಭಾನುವಾರ ಎಳನೀರು ಸೇವಿಸಿ ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸಿದರು -ಪಿಟಿಐ ಚಿತ್ರ   

ಭೋಪಾಲ್‌: ಪ್ರತಿಭಟನಾನಿರತ ರೈತರ ಕೋಪವನ್ನು ಶಮನಗೊಳಿಸಲು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಭಾನುವಾರ ಕೊನೆಗೊಳಿಸಿದ್ದಾರೆ.

ರಾಜ್ಯದಲ್ಲಿ ಶಾಂತಿ ನೆಲೆಸಿದ್ದು, ಸಹಜ ಸ್ಥಿತಿಗೆ ಮರಳುತ್ತಿರುವ ಕಾರಣ ಉಪವಾಸ ಸತ್ಯಾಗ್ರಹ ಕೊನೆಗೊಳಿಸುತ್ತಿರುವುದಾಗಿ ಅವರು ತಿಳಿಸಿದರು.
ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೈಲಾಶ್‌ ಜೋಷಿ ಅವರು ನೀಡಿದ ಎಳನೀರು ಕುಡಿದು ಉಪವಾಸ ಅಂತ್ಯಗೊಳಿಸಿದರು. 

ಶನಿವಾರ ಮತ್ತು ಭಾನುವಾರ ರಾಜ್ಯದಲ್ಲಿ ಯಾವುದೇ ಹೊಸ ಹಿಂಸಾತ್ಮಕ ಘಟನೆಗಳು ವರದಿಯಾಗಿಲ್ಲ. ಪರಿಸ್ಥಿತಿ ಶಾಂತವಾಗಿದ್ದು ಜಿಲ್ಲೆಯಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 144  ಅಡಿ ನಿಷೇಧಾಜ್ಞೆ ಜಾರಿಯಲ್ಲಿದೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಕೆಲವು ದಿನಗಳಿಂದ ನಡೆಸುತ್ತಿರುವ ಹೋರಾಟ ಹಿಂಸೆಗೆ ತಿರುಗಿದ ಕಾರಣ ಚೌಹಾಣ್‌ ಶನಿವಾರ ಉಪವಾಸ ಆರಂಭಿಸಿದ್ದರು.

ಸತ್ಯಾಗ್ರಹ ಆರಂಭಿಸಿದ್ದ ಬಿಎಚ್ಇಎಲ್‌ ದಸರಾ ಮೈದಾನದಿಂದಲೇ  ಸರ್ಕಾರದ ದೈನಂದಿನ ಆಡಳಿತ ನಡೆಸುವುದಾಗಿ ಘೋಷಿಸಿದ್ದ ಅವರು, ರಾಜ್ಯದಲ್ಲಿ ಶಾಂತಿ ಮರು ಸ್ಥಾಪನೆಯಾಗುವವರೆಗೂ ಉಪವಾಸ ಕೈಬಿಡುವುದಿಲ್ಲ ಎಂದಿದ್ದರು.

ರೈತ ನಿಯೋಗಗಳ ಭೇಟಿ: 15 ರೈತ ನಿಯೋಗಗಳು ಮತ್ತು 236 ರೈತ ಸಮಿತಿಗಳ ಸದಸ್ಯರು, ಸತ್ಯಾಗ್ರಹ ನಿರತ ಮುಖ್ಯಮಂತ್ರಿಯನ್ನು  ಭೇಟಿ ಮಾಡಿದರು.

ಕೃಷಿ ಉತ್ಪನ್ನಗಳಿಗೆ ಸಮಾಧಾನಕರ ಬೆಲೆ ನೀಡುವಂತೆ ಮತ್ತು ರೈತರ ಸಾಲ ಮನ್ನಾ ಮಾಡುವಂತೆ ನಿಯೋಗಗಳ ಸದಸ್ಯರು ಒತ್ತಾಯಿಸಿದರು.

‘ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಕುಟುಂಬದ ಸದಸ್ಯರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಉಪವಾಸ ಕೈಬಿಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಂದಕುಮಾರ್ ಸಿಂಗ್‌ ಚೌಹಾಣ್‌ ಅವರು ತಿಳಿಸಿದರು.

ಯಾದವ್‌, ಮೇಧಾ, ಅಗ್ನಿವೇಶ್‌ ಬಂಧನ
ಗೋಲಿಬಾರ್‌ನಲ್ಲಿ ಮೃತಪಟ್ಟ ಐವರು ರೈತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಭಾನುವಾರ ಮಂದ್‌ಸೌರ್‌ಗೆ ತೆರಳುತ್ತಿದ್ದ ಸ್ವರಾಜ್‌ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್‌, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಮತ್ತು ಸ್ವಾಮಿ ಅಗ್ನಿವೇಶ್ ಅವರನ್ನು ಪೊಲೀಸರು ಮಾರ್ಗಮಧ್ಯೆ ಬಂಧಿಸಿದ್ದಾರೆ.

30 ಬೆಂಬಲಿಗರೊಂದಿಗೆ ಹೊರಟಿದ್ದ ಈ ಮೂವರು ನಾಯಕರನ್ನು  ರತ್ಲಂ ಜಿಲ್ಲೆಯ ಜೋರಾ ಪಟ್ಟಣದ ಟೋಲ್‌ ಕೇಂದ್ರದ ಬಳಿ ಪೊಲೀಸರು  ತಡೆದರು. ಇದನ್ನು ಪ್ರತಿಭಟಿಸಿ ಅವರು ಹೆದ್ದಾರಿಯಲ್ಲಿಯೇ ಪ್ರತಿಭಟನೆ ನಡೆಸಿದರು. ಮೂವರು ನಾಯಕರ ಜತೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮೋಹಿತ್‌ ಕುಮಾರ್‌ ಪಾಂಡೆ ಮತ್ತು ದೇಶದ ವಿವಿಧೆಡೆಯಿಂದ ಬಂದಿದ್ದ ರೈತ ಸಂಘಟನೆಗಳ ನಾಯಕರನ್ನು ಪೊಲೀಸರು ಬಂಧಿಸಿದರು.
*
ಮಂದ್‌ಸೌರ್‌ನಲ್ಲಿ  ರೈತರ ಸಾವಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಕಠಿಣ ಶಿಕ್ಷೆ ಕಾದಿದೆ.
ಶಿವರಾಜ್‌ ಸಿಂಗ್ ಚೌಹಾಣ್‌
ಮಧ್ಯಪ್ರದೇಶದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT