ADVERTISEMENT

ಮಲ್ಯ ವಿರುದ್ಧ ಮತ್ತೆ ವಾರಂಟ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 19:30 IST
Last Updated 6 ಆಗಸ್ಟ್ 2016, 19:30 IST
ಮಲ್ಯ ವಿರುದ್ಧ ಮತ್ತೆ ವಾರಂಟ್
ಮಲ್ಯ ವಿರುದ್ಧ ಮತ್ತೆ ವಾರಂಟ್   

ನವದೆಹಲಿ (ಪಿಟಿಐ):  2012ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ವಿರುದ್ಧ ಇಲ್ಲಿನ ನ್ಯಾಯಾಲಯವು ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ.

ನ್ಯಾಯಾಲಯದಲ್ಲಿ ಮಲ್ಯ ಹಾಜರಿರುವಂತೆ ಮಾಡಲು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದು ತಿಳಿಸಿದ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಸುಮಿತ್ ಆನಂದ್ ಅವರು ಜಾಮೀನುರಹಿತ ವಾರಂಟ್ ಹೊರಡಿಸಿದರು.

ಲಂಡನ್‌ನಲ್ಲಿ ಇರುವ ಮಲ್ಯ ಅವರಿಗೆ  ವಿದೇಶಾಂಗ ಸಚಿವಾಲಯದ ಮೂಲಕ ವಾರಂಟ್ ಜಾರಿ ಮಾಡಿ ನವೆಂಬರ್ ನಾಲ್ಕರಂದು ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತೆ ಪೊಲೀಸರಿಗೆ ಆದೇಶಿಸಿದರು.

ಅನೇಕ ಬಾರಿ ಸಮನ್ಸ್ ಜಾರಿ ಮಾಡಿದರೂ ಮಲ್ಯ ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಕಠಿಣ ಕ್ರಮ ಜರುಗಿಸುವ ಮೂಲಕ ಅವರನ್ನು ನ್ಯಾಯಾಲಯಕ್ಕೆ ಕರೆಯಿಸುವುದು ಅನಿವಾರ್ಯವಾಗಿದೆ. ಈಗ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಮ್ಯಾಜಿಸ್ಟ್ರೇಟ್ ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಡಿಐಎಎಲ್‌ ಕಂಪೆನಿಗೆ ಮಲ್ಯ ಒಡೆತನದ ಕಿಂಗ್‌ ಫಿಷರ್ ಏರ್‌ಲೈನ್ಸ್ ಕಂಪೆನಿಯು ನೀಡಿದ್ದ ₹7.5 ಕೋಟಿಯ ಚೆಕ್ ಬೌನ್ಸ್ ಆಗಿದ್ದು, ಕಂಪೆನಿಯು ಮಲ್ಯ ವಿರುದ್ದ ಪ್ರಕರಣ ದಾಖಲಿಸಿದೆ.

17 ಬ್ಯಾಂಕುಗಳ 9 ಸಾವಿರ ಕೋಟಿ ಬಾಕಿ ಇಟ್ಟುಕೊಂಡಿರುವ ಮಲ್ಯ ವಿರುದ್ಧ ಈಗಾಗಲೇ ಕಾನೂನು ಕ್ರಮ ಆರಂಭಿಸಲಾಗಿದೆ. ಇದಲ್ಲದೆ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಮಾರ್ಚ್‌ನಲ್ಲಿ ದೇಶ ತೊರೆದು ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ವಿರುದ್ಧ ಅನೇಕ ಚೆಕ್‌ ಬೌನ್ಸ್ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.