ADVERTISEMENT

ಮಸೂದ್ ಅಜರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 17 ಮೇ 2016, 19:30 IST
Last Updated 17 ಮೇ 2016, 19:30 IST

ನವದೆಹಲಿ: ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ನಡೆದ ದಾಳಿಯ ರೂವಾರಿಗಳಾದ ಜೈಷೆ ಮೊಹಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಆತನ ಸಹೋದರ ಅಬ್ದುಲ್ ರವುಫ್ ಬಂಧನಕ್ಕೆ ಇಂಟರ್‌ಪೋಲ್ ಹೊಸದಾಗಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

ಈ ಇಬ್ಬರು ಸಹೋದರರ ಬಂಧನಕ್ಕೆ ಜಾಮೀನುರಹಿತ ವಾರಂಟ್ ಪಡೆದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಯು ಇಂಟರ್‌ಪೋಲ್‌ಗೆ ಹೊಸದಾಗಿ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಮನವಿ ಮಾಡಿತ್ತು. ಸಂಸತ್‌ ಭವನ ಮತ್ತು ಕಾಶ್ಮೀರದ ವಿಧಾನಸೌಧದ ಮೇಲೆ ದಾಳಿ ಮಾಡಿದ ಸಂಚಿನಲ್ಲಿ ಭಾಗಿ ಆಗಿರುವ ಅಜರ್ ಹಾಗೂ 1999ರಲ್ಲಿ ವಿಮಾನ ಅಪಹಣ ಮಾಡಿದ್ದಕ್ಕಾಗಿ ರವುಫ್ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್‌ ಹೊರಡಿಸಲಾಗಿದೆ. 

ಈ ಇಬ್ಬರ ಬಂಧನಕ್ಕೆ ಹೊರಡಿಸ ಲಾಗಿರುವ ವಾರಂಟ್‌ ಅನ್ನು ಪಾಕಿಸ್ತಾನ ಸರ್ಕಾರಕ್ಕೆ ನೀಡಿದ್ದರೂ ಏನೂ ಪ್ರಯೋ ಜನಾಗದ ಕಾರಣ ಹೊಸದಾಗಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಪಠಾಣ್‌ಕೋಟ್ ದಾಳಿಯಲ್ಲಿ ಪಾಲ್ಗೊಂಡಿದ್ದ ಭಯೋತ್ಪಾದಕರಿಗೆ ಪಾಕಿಸ್ತಾನ ನೆಲದಿಂದ ಮಾರ್ಗದರ್ಶನ ನೀಡುತ್ತಿದ್ದ ಕಾಶಿಫ್ ಜಾನ್ ಮತ್ತು ಶಾಹಿದ್ ಲತೀಫ್ ವಿರುದ್ಧವೂ ರೆಡ್‌ಕಾರ್ನರ್ ನೋಟಿಸ್ ಹೊರಡಿ ಸುವಂತೆ ಎನ್‌ಐಎ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.