ADVERTISEMENT

ಮಾಜಿ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 13:09 IST
Last Updated 20 ಜುಲೈ 2013, 13:09 IST
ಖುರ್ಷಿದ್ ಆಲಂಖಾನ್  (ಕಡತ ಚಿತ್ರ).
ಖುರ್ಷಿದ್ ಆಲಂಖಾನ್ (ಕಡತ ಚಿತ್ರ).   

ನವದೆಹಲಿ (ಪಿಟಿಐ): ಕರ್ನಾಟಕದ ಮಾಜಿ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ಸಚಿವ ಖುರ್ಷಿದ್ ಆಲಂಖಾನ್ ಅವರು ಶನಿವಾರ ಅನಾರೋಗ್ಯದಿಂದ ನಿಧನರಾದರು.

95 ವರ್ಷ ವಯಸ್ಸಿನ ಖುರ್ಷಿದ್ ಅವರು ಜ್ವರ ಹಾಗೂ ಹೃದಯ ಸೋಂಕಿಗೆ ಒಳಗಾಗಿ ಕೆಲಕಾಲದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಬೆಳಗಿನ ಜಾವ 3 ಗಂಟೆಯಲ್ಲಿ ಅವರು ಸಾವನ್ನಪ್ಪಿದರು ಎಂದು ವೈದ್ಯರು ತಿಳಿಸಿದ್ದಾರೆ.

ಮೂಲತ: ಉತ್ತರಪ್ರದೇಶದ ಫಾರೂಕಾಬಾದ್‌ ಜಿಲ್ಲೆಯವರಾದ ಖಾನ್ ಲೋಕಸಭಾ ಸದಸ್ಯರಾಗಿ 15 ವರ್ಷಕ್ಕೂಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ರಾಜ್ಯಸಭಾ ಸದಸ್ಯರಾಗಿದ್ದ ಇವರು ದಿವಂಗತ ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವನ್ನು ಸ್ವತಂತ್ರ ವಿಶ್ವವಿದ್ಯಾನಿಲಯವನ್ನಾಗಿಸಲು ಸಂಸತ್ತಿನಲ್ಲಿ ಕಾಯಿದೆ ರೂಪಿಸಲು ಇವರು ಬಹುವಾಗಿ ಶ್ರಮಿಸಿದ್ದರು. ನಂತರ ಇದರ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ನಂತರ ಗೋವಾ (1989-91), ಹಾಗೂ ಕರ್ನಾಟಕ (1991-99) ರಾಜ್ಯಗಳ ರಾಜ್ಯಪಾಲರಾಗಿ ನಿಯುಕ್ತರಾಗಿದ್ದರು.

ಖುರ್ಷಿದ್ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನಸಿಂಗ್ ಅವರು ದೇಶವು ಒಬ್ಬ ಒಳ್ಳೆಯ ಪ್ರಾಮಾಣಿಕ ದೇಶ ಸೇವಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಇದೊಂದು ತುಂಬಲಾರದ ನಷ್ಟ ಎಂದು ಅವರು ಶೋಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.