ADVERTISEMENT

ಮಾನೆಸರ್ ಘಟಕ: ಅನಿರ್ದಿಷ್ಟ ಲಾಕೌಟ್- ಮಾರುತಿ ಸುಜುಕಿ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 12:20 IST
Last Updated 21 ಜುಲೈ 2012, 12:20 IST

ನವದೆಹಲಿ (ಐಎಎನ್ಎಸ್): ಬುಧವಾರ ಸಂಭವಿಸಿದ ಹಿಂಸಾಚಾರದ ಕಾರಣಗಳ ಬಗ್ಗೆ ಸಂಪೂರ್ಣ ತನಿಖೆಯಾಗುವವರೆಗೆ ತನ್ನ ಮಾನೆಸರ್ ಘಟಕದಲ್ಲಿ ಉತ್ಪಾದನೆ ಪುನರಾರಂಭಗೊಳ್ಳುವುದಿಲ್ಲ ಎಂದು ಮಾರುತಿ ಸುಜುಕಿ ಶನಿವಾರ ಪ್ರಕಟಿಸಿತು.

~ಮಾನೆಸರ್ ಘಟಕದಲ್ಲಿ ಅನಿರ್ದಿಷ್ಟ ಲಾಕೌಟ್ ಘೋಷಿಸಲಾಗಿದೆ~ ಎಂದು ಅಧ್ಯಕ್ಷ ಆರ್.ಸಿ. ಭಾರ್ಗವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

~ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಕೆಲವು ಕಾರುಗಳನ್ನು ತಯಾರಿಸುವುದು ಮತ್ತು ಹಣ ಸಂಪಾದನೆಗಿಂತ ಸಹೋದ್ಯೋಗಿಗಳ ಸುರಕ್ಷತೆ ಹೆಚ್ಚು ಮಹತ್ವದ್ದು~ ಎಂದು ಅವರು ನುಡಿದರು.

ಒಂಬತ್ತು ತಿಂಗಳ ಹಿಂದೆ ನಡೆದ ಮುಷ್ಕರ ಕಾಲದಲ್ಲಿ ಕಾರ್ಮಿಕರ ಜೊತೆಗೆ ಎಲ್ಲ ವಿಷಯಗಳನ್ನೂ ಆಡಳಿತ ಮಂಡಳಿ ಚರ್ಚಿಸಿ ಸಮಸ್ಯೆ ಬಗೆ ಹರಿಸಿತ್ತು ಎಂದು ಅವರು ನುಡಿದರು.

ಕಾರ್ಮಿಕರು ಮತ್ತು ಆಡಳಿತ ವರ್ಗದ ಮಧ್ಯೆ ಬುಧವಾರ ಸಂಭವಿಸಿದ ಘರ್ಷಣೆಯಲ್ಲಿ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿಯೊಬ್ಬರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದರು.

ಕಾರ್ಖಾನೆಯನ್ನು ಮಾನೆಸರ್ ದಿಂದ ಬೇರೆ ಕಡೆಗೆ ಸ್ಥಳಾಂತರಿಸುವ ಯೋಜನೆಗಳಿವೆ ಎಂಬ ಪುಕಾರುಗಳನ್ನು ಅವರು ನಿರಾಕರಿಸಿದರು. ~ಇಲ್ಲಿಂದ ಬೇರೆ ಕಡೆಗೆ ಕಾರ್ಖಾನೆಯನ್ನು ಸ್ಥಳಾಂತರಿಸಲಾಗುವುದು ಎಂಬುದು ಸಂಪೂರ್ಣ ಕಟ್ಟುಕಥೆ ಎಂದು ಅವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.