ADVERTISEMENT

ಮಾವೊವಾದಿಗಳಿಂದ ಇಟಲಿ ಪ್ರಜೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಭುವನೇಶ್ವರ (ಪಿಟಿಐ): 29 ದಿನಗಳ ಹಿಂದೆ ಕಂಧಮಲ್ ಜಿಲ್ಲೆಯ ಅರಣ್ಯ ಪ್ರದೇಶದಿಂದ ಅಪಹರಣಕ್ಕೊಳಗಾಗಿದ್ದ ಇಟಲಿ ಪ್ರಜೆ ಪೌಲೊ ಬೊಸಸ್ಕೊ ಅವರನ್ನು ಮಾವೋವಾದಿಗಳು ಗುರುವಾರ ಬಿಡುಗಡೆ ಮಾಡಿದ್ದಾರೆ.

ಬುಡಕಟ್ಟು ಸಮುದಾಯದವರೇ ಹೆಚ್ಚಾಗಿ ವಾಸಿಸುವ ಕಂಧಮಲ್ ಜಿಲ್ಲೆಯ ಗಡಿಭಾಗ ಗಜಪತಿ ಮತ್ತು ಗಂಜಮ್ ಅರಣ್ಯ ಪ್ರದೇಶದಲ್ಲಿ ಸರ್ಕಾರದ ಪರ ಸಂಧಾನಕಾರ ದಂಡಪಾಣಿ ಮೊಹಾಂತಿ ಮತ್ತು ಕೆಲವು ಮಾಧ್ಯಮ ಪ್ರತಿನಿಧಿಗಳಿಗೆ ಮಾವೊವಾದಿಗಳು ಬೊಸಸ್ಕೊ (54) ಅವರನ್ನು ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಡುಗಡೆಯಾದ ಇಟಲಿ ಪ್ರಜೆಗಳನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ಸಂಧಾನಕಾರರಾದ ಮೊಹಂತಿ ಹಾಗೂ ಬಿ.ಡಿ. ಶರ್ಮಾ ಅವರೊಂದಿಗೆ ರಾಜಧಾನಿಗೆ ಕರೆತರಲಾಯಿತು.

ಬಿಡುಗಡೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಸಸ್ಕೊ, `ನಾನೀಗ ಸ್ವತಂತ್ರನಾಗಿದ್ದೇನೆ. ತುಂಬಾ ಬಳಲಿರುವುದರಿಂದ ವಿಶ್ರಾಂತಿಯ ಅಗತ್ಯವಿದೆ~ ಎಂದು ಹೇಳಿದರು.~

29 ದಿನಗಳ ಹಿಂದೆ ಪುರಿಯ ಮೂಲದ  ಇಟಲಿಯ ಪ್ರವಾಸೋದ್ಯಮದ ನೌಕರ 54 ವರ್ಷದ ಬೊಸಸ್ಕೊ, ತನ್ನ ಇನ್ನೊಬ್ಬ ಇಟಲಿ ಪ್ರವಾಸಿಗ 61 ವರ್ಷದ ಕೊಲಾಂಗೆಲೊ ಅವರೊಂದಿಗೆ ಕಂಧಮಲ್ ಜಿಲ್ಲೆಯ ದರಿಂಗ್‌ಬದಿ ಅರಣ್ಯಕ್ಕೆ ಚಾರಣಕ್ಕೆ ಹೋಗಿದ್ದಾಗ ಮಾವೊವಾದಿಗಳು ಅವರನ್ನು ಅಪಹರಿಸಿದ್ದರು.

ಬೋಸಸ್ಕೊ ಮತ್ತು ಸಹವರ್ತಿಯ ಬಿಡುಗಡೆಗಾಗಿ ಜೈಲಿನಲ್ಲಿರುವ ಶುಭಶ್ರೀ ಸೇರಿದಂತೆ ಏಳು ಮಂದಿಯನ್ನು ಬಿಡುಗಡೆ ಮಾಡಬೇಕೆಂದು ಮಾವೋವಾದಿಗಳು ಸರ್ಕಾರಕ್ಕೆ ಷರತ್ತು ವಿಧಿಸಿದ್ದರು.

ಒಡಿಶಾದ ಪ್ರಮುಖ ಮಾವೊವಾದಿ ಸಂಘಟನೆಯ ನಾಯಕ ಪಾಂಡಾ ಪತ್ನಿ ಮಿಲಿ ಪಾಂಡ ಬಿಡುಗಡೆಯಾದ ಎರಡು ದಿನಗಳ ನಂತರ ಇಟಲಿ ಪ್ರಜೆಗಳನ್ನು ಮಾವೊವಾದಿಗಳು ಬಿಡುಗಡೆ ಮಾಡಿದ್ದಾರೆ. ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುನಾಪುರ್ ನ್ಯಾಯಾಲಯ ಈಕೆಗೆ ಜೈಲು ಶಿಕ್ಷೆ ವಿಧಿಸಿತ್ತು.

ಇಟಲಿ ಸ್ವಾಗತ (ರೋಮ್ ವರದಿ- ಎಎಫ್‌ಪಿ): ಒಡಿಶಾದಲ್ಲಿ ಮಾವೊವಾದಿಗಳು ಅಪಹರಿಸಿದ್ದ ತನ್ನ ಪ್ರಜೆಯನ್ನು ಗುರುವಾರ ಬಿಡುಗಡೆ ಮಾಡಿರುವುದನ್ನು ಇಟಲಿ ಸ್ವಾಗತಿಸಿದೆ. ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಭಾರತೀಯ ಅಧಿಕಾರಿಗಳು ಮತ್ತು ತನ್ನ ರಾಯಭಾರಿಯನ್ನು ಶ್ಲಾಘಿಸಿದೆ.

`ಇದು ಅತ್ಯಂತ ಸೂಕ್ಷ್ಮವಾದ ಕೆಲಸವಾಗಿತ್ತು. ನಮ್ಮ ದೇಶ ಬಾಂಧವನ ಜೀವ ರಕ್ಷಣೆ ಮತ್ತು ಸುರಕ್ಷಿತ ಬಿಡುಗಡೆಗಾಗಿ ಎಲ್ಲ ಮಟ್ಟದಲ್ಲೂ ಸತತವಾಗಿ ಶ್ರಮ ವಹಿಸಲಾಗಿತ್ತು~ ಎಂದು ವಿದೇಶಾಂಗ ಸಚಿವ ಗಿಯೊಲಿಯೊ ಟೆರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.