ನವದೆಹಲಿ: ಮುಂಗಾರು ಮಳೆ ಕೊರತೆಯ ದುಷ್ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ತೋರತೊಡಗಿದ್ದು, ವಿಶೇಷವಾಗಿ ಬೇಳೆಕಾಳುಗಳು ಮತ್ತು ಖಾದ್ಯ ಎಣ್ಣೆಯ ಬೆಲೆ ಗಗನಮುಖಿಯಾಗುತ್ತಿದೆ.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಕ್ರೋಡೀಕರಿಸಿರುವ ಅಂಕಿಅಂಶದ ಪ್ರಕಾರ, ತೊಗರಿ, ಮಸೂರ್ ಮತ್ತು ಕಡಲೆ ಬೇಳೆಗಳ ಬೆಲೆ ಮೂರು ತಿಂಗಳಲ್ಲಿ, 2012ರ ಏಪ್ರಿಲ್ 18ರಿಂದ ಜುಲೈ 18ರ ಅವಧಿಗೆ ಹೋಲಿಸಿದರೆ ಶೇ 5ರಿಂದ 10ರಷ್ಟು ಹೆಚ್ಚಾಗಿದೆ.
ಶೇಂಗಾ, ವನಸ್ಪತಿ ಸೇರಿದಂತೆ ಅಡುಗೆ ಎಣ್ಣೆಗಳ ಬೆಲೆ ಶೇ 4ರಷ್ಟು ಏರಿದ್ದರೆ, ಸಕ್ಕರೆ ಬೆಲೆ ಶೇ 1.3ರಷ್ಟು ಅಧಿಕವಾಗಿದೆ. ತರಕಾರಿಗಳ ಬೆಲೆ ಶೇ 19ರಿಂದ 24ರಷ್ಟು ಹೆಚ್ಚಾಗಿದೆ.
ಬೇಳೆಕಾಳುಗಳ ಮತ್ತು ಅಡುಗೆ ಎಣ್ಣೆಗಳ ಬೆಲೆ ಹೆಚ್ಚಾಗಲು, ಮಳೆ ಕೊರತೆಯಿಂದಾಗಿ ಉತ್ಪಾದನೆ ಇಳಿಮುಖವಾಗುವ ಅಂದಾಜು ಕಾರಣವಾಗಿದೆ. ಶೇ 50ಕ್ಕೂ ಹೆಚ್ಚು ಅಡುಗೆ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಮತ್ತೊಂದು ಕಾರಣವೆನ್ನಲಾಗಿದೆ. ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆ ನೀಡುತ್ತಿರುವುದು ಅಕ್ಕಿ, ಗೋಧಿ ಬೆಲೆ ಹೆಚ್ಚಾಗಲು ಕಾರಣವೆನ್ನಲಾಗಿದೆ.
ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಪ್ರತಿದಿನದ ಬೆಲೆ ತರಿಸಿಕೊಂಡು ಕ್ರೋಡೀಕರಿಸಿರುವ ಪಟ್ಟಿಯ ಪ್ರಕಾರ, ಅಕ್ಕಿ ಮತ್ತು ಗೋಧಿ ಬೆಲೆ ಶೇ 2.42ರಷ್ಟು ಏರುಮುಖವಾಗಿದೆ.
ಇದುವರೆಗೆ ರಾಷ್ಟ್ರದಲ್ಲಿ ಮುಂಗಾರು ಕೊರತೆ ಪ್ರಮಾಣ ಶೇ 21ರಷ್ಟಿದ್ದು, ಈ ಪೈಕಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅತ್ಯಧಿಕ, ಅಂದರೆ ಶೇ 40ರಷ್ಟು ಕೊರತೆಗೆ ತುತ್ತಾಗಿವೆ. ಕಳೆದ ವರ್ಷದ ಜುಲೈ 13ರ ಅವಧಿ ವೇಳೆಗೆ ರಾಷ್ಟ್ರದ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳುಗಳ ಬಿತ್ತನೆಯಾಗಿತ್ತು. ಈ ಬಾರಿ, 20 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬೇಳೆಕಾಳುಗಳ ಬಿತ್ತನೆ ನಡೆದಿದೆ. ಹಾಗೆಯೇ ಎಣ್ಣೆಕಾಳುಗಳ ಬಿತ್ತನೆ ಕಳೆದ ವರ್ಷ 86 ಲಕ್ಷ ಹೆಕ್ಟೇರ್ ಇದ್ದುದು ಈ ಬಾರಿ 67 ಲಕ್ಷ ಹೆಕ್ಟೇರ್ ಮಾತ್ರ ಇದೆ.
ಈ ಹಿನ್ನೆಲೆಯಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಬುಧವಾರ ರಾತ್ರಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಅಕ್ಕಿ, ಗೋಧಿ ಮತ್ತು ಸಕ್ಕರೆ ರಫ್ತಿನ ಮೇಲೆ ನಿಗಾ ಇಡಲು ಆಹಾರ ಸಚಿವ ಕೆ.ವಿ.ಥಾಮಸ್ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರಿಗೆ ಸೂಚಿಸಿದ್ದಾರೆ.
ಬೇಳೆಕಾಳುಗಳ ಉತ್ಪಾದನೆಯಲ್ಲಿ ಕುಸಿತವಾಗುವ ಬಗ್ಗೆ ಸಚಿವ ಥಾಮಸ್ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು. ಬೇಳೆಕಾಳುಗಳನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡು, ಬಡವರಿಗೆ ಕೆ.ಜಿ.ಗೆ 20 ರೂಪಾಯಿ ಸಬ್ಸಿಡಿ ದರದಲ್ಲಿ ವಿತರಿಸಲು ಎಂಎಂಟಿಸಿ ಮತ್ತು ರಾಜ್ಯ ವಹಿವಾಟು ನಿಗಮಗಳಿಗೆ (ಎಸ್‌ಟಿಸಿ) ಸೂಚಿಸಲಾಗುವುದು ಎಂದು ಥಾಮಸ್ ಇದೇ ವೇಳೆ ತಿಳಿಸಿದರು.
ಅಗತ್ಯ ಆಹಾರ ವಸ್ತುಗಳ ಬೆಲೆ ಕೃತಕವಾಗಿ ಏರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಬೇಳೆಕಾಳುಗಳು ಮತ್ತು ಅಡುಗೆ ಎಣ್ಣೆಗಳ ಸಂಗ್ರಹಕ್ಕೆ ಮಿತಿ ವಿಧಿಸುವ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ ಎಂದರು.
ಪ್ರಸಕ್ತ ಜೂನ್ 2012ರ ಅವಧಿಗೆ, ಆಹಾರ ಹಣದುಬ್ಬರ ಪ್ರಮಾಣವು ಶೇ 10.81ರಷ್ಟು ಇದೆ. ಮೇ ತಿಂಗಳಲ್ಲಿ ಈ ಪ್ರಮಾಣ ಶೇ 10.74ರಷ್ಟಿತ್ತು. ಹೋದ ವರ್ಷದ ಜೂನ್ ಇದೇ ಅವಧಿಯಲ್ಲಿ ಆಹಾರ ಹಣದುಬ್ಬರ ಪ್ರಮಾಣ ಶೇ 7.6ರಷ್ಟು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.