ADVERTISEMENT

ಮುಂಗಾರು ಮಳೆ: ದಕ್ಷಿಣಕ್ಕೆ ಅಲ್ಪ ಕೊರತೆ ಸಾಧ್ಯತೆ

ಪಿಟಿಐ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಈ ಬಾರಿ ವಾಡಿಕೆಯಷ್ಟು ಮಳೆ ಸುರಿಯಲಿದೆ. ಆದರೆ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಮಳೆ ಸುರಿಯಲು ಆರಂಭವಾದ ಮರುದಿನ ಇಲಾಖೆಯು ಎರಡನೇ ಹಂತದ ಈ ಅಂದಾಜನ್ನು ಪ್ರಕಟಿಸಿದೆ. ಏಪ್ರಿಲ್‌ನಲ್ಲಿ ಮೊದಲ ಅಂದಾಜು ಪ್ರಕಟಿಸಲಾಗಿತ್ತು. ಅದರಲ್ಲಿ ಶೇ 96ರಿಂದ 104ರಷ್ಟು ಮಳೆ ಸುರಿಯಬಹುದು ಎಂದು ಅಂದಾಜಿಸಿತ್ತು.

ಮುಂಗಾರು ಪ್ರಯಾಣ

ADVERTISEMENT

* ಮುಂದಿನ 24 ತಾಸುಗಳಲ್ಲಿ ಮುಂಗಾರು ಮಾರುತವು ಈಶಾನ್ಯದ ಕೆಲವು ರಾಜ್ಯಗಳತ್ತ ತಲುಪುವುದಕ್ಕೆ ಅಗತ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ

* ಜೂನ್‌ 3ರ ಹೊತ್ತಿಗೆ ಮುಂಗಾರು ಮಾರುತವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಇನ್ನಷ್ಟು ವ್ಯಾಪಿಸಲಿದೆ

* ಜೂನ್‌ 6ರಿಂದ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ

ಕರ್ನಾಟಕ ಕರಾವಳಿ, ಒಳನಾಡಿನತ್ತ...

ಕೇರಳದ ವಿವಿಧ ಭಾಗಗಳು, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಮುಂಗಾರು ವ್ಯಾಪಿಸಿದೆ. ತಮಿಳುನಾಡಿನ ಒಳನಾಡು ಪ್ರದೇಶಗಳಲ್ಲಿಯೂ ಮಳೆಯಾಗುತ್ತಿದೆ. ಉತ್ತರ ಕೇರಳದ ಕೆಲವು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಕಣ್ಣೂರು, ತಳಿಪರಂಬ ಮತ್ತು ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ ಗರಿಷ್ಠ 12 ಸೆ.ಮೀ. ಮಳೆ ಸುರಿದಿದೆ.

ಮೂರು ದಿನ ಮೊದಲೇ ಆರಂಭ

ವಾಡಿಕೆಯಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಾಡಿಕೆಗಿಂತ ಮೂರು ದಿನ ಮೊದಲೇ ಮುಂಗಾರು ಕೇರಳಕ್ಕೆ ಕಾಲಿಟ್ಟಿದೆ. ಹಾಗಾಗಿ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆ ಯೋಜಿಸಲು ರೈತರಿಗೆ ಸಾಕಷ್ಟು ಸಮಯ ಸಿಕ್ಕಿದೆ.

ಸ್ಕೈಮೆಟ್‌ ಅಂದಾಜು

* ಜೂನ್ – 111%

* ಜುಲೈ – 97%

* ಆಗಸ್ಟ್ – 96%

ದೀರ್ಘಾವಧಿ ಮಳೆ ಸರಾಸರಿ (ಎಲ್‌ಪಿಎ)

50 ವರ್ಷಗಳಲ್ಲಿ ಸುರಿದ ಮಳೆಯ ಸರಾಸರಿಯನ್ನು ದೀರ್ಘಾವಧಿ ಸರಾಸರಿ ಎಂದು ಪರಿಗಣಿಸಲಾಗುತ್ತದೆ. ಈಗಿನ ಎಲ್‌ಪಿಎ 89 ಸೆ.ಮೀ. ಇದೆ. ಇಷ್ಟು ಮಳೆ ಸುರಿದರೆ ಅದನ್ನು ವಾಡಿಕೆ ಮಳೆ ಎಂದು ಪರಿಗಣಿಸಲಾಗುತ್ತದೆ.

ಎಚ್ಚರಿಕೆ: ಕರ್ನಾಟಕ ಕರಾವಳಿ, ಉತ್ತರ ಕೇರಳದ ಕರಾವಳಿಯಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಯಾಗ ಬಹುದು. ಸಮುದ್ರದ ಅಬ್ಬರ ತೀವ್ರವಾಗಿರಲಿದೆ. ಕರ್ನಾಟಕ, ಕೇರಳ, ಲಕ್ಷದ್ವೀಪ, ಮಾಲ್ಡೀವ್ಸ್‌ನಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ.

ಮಳೆ ಲೆಕ್ಕಾಚಾರ

90%ಕ್ಕಿಂತ ಕಡಿಮೆ: ಕೊರತೆ

90%–96%: ವಾಡಿಕೆಗಿಂತ ಕಡಿಮೆ

96%–104%: ವಾಡಿಕೆ ಮಳೆ

104%–110%: ವಾಡಿಕೆಗಿಂತ ಹೆಚ್ಚು

110%ಕ್ಕಿಂತ ಹೆಚ್ಚು: ಭಾರಿ ಮಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.