ADVERTISEMENT

ಮುಂಡೆಗೆ ಅಶ್ರುತರ್ಪಣದ ವಿದಾಯ

ಅಂತ್ಯಸಂಸ್ಕಾರ ವೇಳೆ ಘರ್ಷಣೆ: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2014, 20:19 IST
Last Updated 4 ಜೂನ್ 2014, 20:19 IST

ಪರಳಿ (ಭೀಡ್‌ ಜಿಲ್ಲೆ, ಮಹಾರಾಷ್ಟ್ರ) (ಪಿಟಿಐ): ಜನ­ಸಾಗರ ಮತ್ತು ಕುಟುಂಬದವರ ಕಣ್ಣೀರಿನ ನಡುವೆ ಮಹಾರಾಷ್ಟ್ರದ ಬಿಜೆಪಿ ಜನನಾಯಕ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್‌ ಮುಂಡೆ (63) ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ಪರಳಿಯ ತೋತಲಾ ಮೈದಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ಮಧ್ಯಾಹ್ನ ನಡೆಯಿತು.

ಈ ಮಧ್ಯೆ, ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲಾಗದ ಮುಂಡೆ ಅವರ ಅಭಿಮಾನಿಗಳು ಘರ್ಷಣೆಗೆ ಇಳಿದರು. ಕಲ್ಲು ತೂರಾಟ, ಕಾರಿಗೆ ಬೆಂಕಿ ಹೊತ್ತಿಸಿದ ಕಾರಣ ಪೊಲೀಸರು ಲಾಠಿ ಪ್ರಹಾರ ಮಾಡಿದರು.

‘ಗೋಪಿನಾಥ್‌ ಮುಂಡೆ ಅಮರ್‌ ರಹೇ’, ‘ಮುಂಡೆ ಸಾಹೇಬ್‌ ಪರತ್‌ ಯಾ’ (ಮುಂಡೆ ಸಾಹೇ­ಬರೇ ಮತ್ತೆ ಹುಟ್ಟಿ ಬನ್ನಿ) ಘೋಷಣೆಗಳು ಮೊಳಗುತ್ತಿದ್ದ ಹೊತ್ತಿನಲ್ಲಿ ಮುಂಡೆ ಅವರ ಹಿರಿಯ ಪುತ್ರಿ– ಭೀಡ್‌ ಕ್ಷೇತ್ರದ ಶಾಸಕಿ ಪಂಕಜಾ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಹಿಂದೂ ಸಂಪ್ರದಾಯದಲ್ಲಿ ಅಂತ್ಯಕ್ರಿಯೆಯನ್ನು ಗಂಡು ಮಕ್ಕಳು ಇಲ್ಲವೇ ಅಳಿಯ ನೆರವೇರಿಸು­ತ್ತಾರೆ. ಮುಂಡೆ ಅವರ ಪುತ್ರಿ ಇದನ್ನು ಮುರಿದು ಪ್ರೀತಿ­­ಪಾತ್ರ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದರು.

ಕಲ್ಲು ತೂರಾಟ– ಲಾಠಿ ಪ್ರಹಾರ
ಸುಡು ಬಿಸಿಲನ್ನೂ ಲೆಕ್ಕಿಸದೆ ಜನನಾಯಕನ ಅಂತಿಮ ದರ್ಶನಕ್ಕಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಪರಳಿಗೆ ಬಂದಿದ್ದರು. ಆದರೆ, ಅಂತಿಮ ದರ್ಶನ ಪಡೆಯಲಾಗದ ಕಾರಣ ರೊಚ್ಚಿಗೆದ್ದ ಅಭಿ­ಮಾನಿ­ಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಆ ಸಂದರ್ಭದಲ್ಲಿ ಕಲ್ಲು ತೂರಾಟ ಕೂಡ ನಡೆ­ಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.

ಈ ಸಂದರ್ಭದಲ್ಲಿ ಅಗ್ನಿ ಸ್ಪರ್ಶ ಮಾಡಲು ಚಿತೆ ಇರಿ­ಸಿದ್ದ ವೇದಿಕೆಯ ಬಳಿ ನಿಂತಿದ್ದ ಮುಂಡೆ ಪುತ್ರಿ ಪಂಕಜಾ, ರೊಚ್ಚಿಗೆದ್ದ ಜನರನ್ನು ಶಾಂತಿಯಿಂದ ಇರು­­ವಂತೆ ಧ್ವನಿ ವರ್ಧಕದ ಮೂಲಕ ವಿನಂತಿ­ಸಿ­ಕೊಂ­ಡರು. ಜನ ಸಮೂಹ ಕ್ಷಣ ಕಾಲ ಶಾಂತ­ವಾಯಿತು.

ಆದರೆ, ಮರುಗಳಿಗೆಯಲ್ಲೇ ಗುಂಪಿನ ಮಧ್ಯ­ದಿಂದ ‘ಮುಂಡೆ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಬೇಕು’ ಎಂಬ ಘೋಷಣೆ ಕೇಳಿಬಂತು. ಇದನ್ನು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬೆಂಬಲಿಸಿ­ದರು. ಈ ಸಂದರ್ಭದಲ್ಲಿ ಜನರ ಕೂಗು ಮುಗಿಲು­ಮುಟ್ಟಿತು, ಗದ್ದಲ ತಾರಕಕ್ಕೇರಿತು. ಅಷ್ಟರಲ್ಲಿ ಚಿತೆಗೆ ಅಗ್ನಿ ಸ್ಪರ್ಶ ಆಗಿತ್ತು. ರೊಚ್ಚಿಗೆದ್ದ ಜನರು ಅಂತ್ಯ­ಸಂಸ್ಕಾರ ಮುಗಿದ ಮೇಲೆ ಅಲ್ಲಿ ದಾಂದಲೆ ನಡೆಸಿದರು.

ಜನರ ಕ್ರೋಧಾಗ್ನಿಗೆ ಒಂದು ಕಾರು ಆಹುತಿ ಆಯಿತು. ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಮತ್ತು ಅವರ ಮಂತ್ರಿ ಮಂಡಲದ ಕೆಲವು ಸದಸ್ಯರ  ಕಾರಗಳನ್ನು ಜನರು ಅಡ್ಡಗಟ್ಟಿದರು.

ಆಕ್ರೋಶಗೊಂಡಿದ್ದ ಜನರು ಮುಖ್ಯಮಂತ್ರಿ ಅವರ ಕಾರಿನ ಮುಂಭಾಗದ (ಬಾನೆಟ್‌) ಮೇಲೆ ಮುಷ್ಟಿ­ಯಿಂದ ಗುದ್ದುತ್ತಿದ್ದ ದೃಶ್ಯಗಳು ಸುದ್ದಿವಾಹಿನಿ­ಗ­­ಳಲ್ಲಿ ಪ್ರಸಾರವಾಗಿವೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಆಗಲೂ ಲಾಠಿ ಪ್ರಹಾರ ಮಾಡಿದರು.

ಅಂತ್ಯಕ್ರಿಯೆಗೂ ಮೊದಲು ಮುಂಡೆ ಅವರ ಪಾರ್ಥಿವ ಶರೀರವನ್ನು ವೈದ್ಯನಾಥ್‌ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ಭೀಡ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಜಯಗಳಿಸಿದ ಗೋಪಿನಾಥ್‌ ಮುಂಡೆ ಇದೇ ಮೊದಲ ಬಾರಿಗೆ ಕೇಂದ್ರ­ದಲ್ಲಿ ಸಚಿವರಾಗಿದ್ದರು. ಸಚಿವರಾಗಿ ಪ್ರಮಾಣ­ವಚನ ಸ್ವೀಕರಿಸಿದ (ಮೇ 26)  ಒಂಬ­ತ್ತನೇ ದಿನವೇ (ಜೂನ್‌ 3, ಮಂಗಳವಾರ) ನವ­ದೆಹಲಿ­ಯಲ್ಲಿ ಕಾರು ಅಪಘಾತದ ಆಘಾತ­ದಿಂದ ಕೊನೆಯುಸಿರೆಳೆದರು.

ಮುಂಡೆ ಅವರ ಸ್ವಗ್ರಾಮ ಪರಳಿಯಲ್ಲಿ ಬುಧವಾರ ಆಯೋಜಿತವಾಗಿದ್ದ ಅಭಿನಂದನಾ ಸಮಾರಂಭ­ದಲ್ಲಿ ಪಾಲ್ಗೊಳ್ಳುವ ಸಲು­ವಾಗಿ ನವದೆಹಲಿಯಿಂದ ಮಹಾರಾಷ್ಟ್ರಕ್ಕೆ ಹೋಗಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದಾಗ ಈ ಅಪಘಾತ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.