ADVERTISEMENT

ಮೋದಿ ಪಟ್ಟಕ್ಕೆ ಒತ್ತಡ

ಮಣಿಯದ ಅಡ್ವಾಣಿ, ಸುಷ್ಮಾ: ಮುಂದುವರಿದ ಸಂಧಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 20:00 IST
Last Updated 12 ಸೆಪ್ಟೆಂಬರ್ 2013, 20:00 IST

ನವದೆಹಲಿ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ  ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಘೋಷಿಸುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲು ಬಿಜೆಪಿ, ಶುಕ್ರವಾರ ಸಂಸದೀಯ ಮಂಡಳಿ ಸಭೆ ಕರೆಯಲು ತೀರ್ಮಾನಿಸಿದೆ.
ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲು ವಿಷಯದಲ್ಲಿ ವಿಳಂಬ ಮಾಡಲು ಸಿದ್ಧರಿಲ್ಲದ ರಾಜನಾಥ್‌ ಸಿಂಗ್‌, ಶುಕ್ರವಾರ ಸಂಜೆ 5 ಗಂಟೆಗೆ ಸಂಸದೀಯ ಮಂಡಳಿ ಸಭೆ ಕರೆದಿದ್ದಾರೆ. 

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಮೋದಿ ಬೆಂಬಲಕ್ಕೆ ನಿಂತಿರುವ ಪಕ್ಷದ ಅಗ್ರ­ಗಣ್ಯರು ಶೀಘ್ರವಾಗಿ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕೆಂಬ ಒತ್ತಡ ಹಾಕು­ತ್ತಿದ್ದಾರೆ. ಅಡ್ವಾಣಿ ಅವರೂ ಸೇರಿದಂತೆ ಈ ವಿಷಯದಲ್ಲಿ ತಕರಾರು ಹೊಂದಿ­ರುವ ಹಿರಿಯ ಮುಖಂಡರನ್ನು ಮನ­ವೊಲಿಸಲು ಶತ ಪ್ರಯತ್ನಗಳು ಬಿಜೆಪಿ­ಯಲ್ಲಿ ಗುರುವಾರ ರಾತ್ರಿ ಕೂಡ ಬಿರುಸಿನಿಂದ ಸಾಗಿತ್ತು.

ನಿಲುವು ಸಡಿಲಿಸದ ಅಡ್ವಾಣಿ: ಪಕ್ಷದ ಹಿರಿಯ ಮುಖಂಡರಾದ ಎಂ. ವೆಂಕಯ್ಯ ನಾಯ್ಡು ಮತ್ತು ಅನಂತ­ಕುಮಾರ್‌ ಅವರು  ಅಡ್ವಾಣಿ ಅವ­ರನ್ನು ಗುರುವಾರ ಭೇಟಿ ಮಾಡಿ, ನಿಲುವು ಸಡಿಲಿಸಲು ಕೋರಿ­ದರು. ಆದರೆ, ಅವರು ಇದಕ್ಕೆ ಮಣಿ­ಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಮತ್ತು ಮುರಳಿ ಮನೋಹರ ಜೋಷಿ ಅವರೂ ಇಂತಹದ್ದೇ ಬಿಗಿ ನಿಲುವು ತಳೆದಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಈ ಇಬ್ಬರೂ ತಮ್ಮ ಆಕ್ಷೇಪ ವ್ಯಕ್ತಪಡಿ­ಸುವ ಸಾಧ್ಯತೆ ಇದೆ ಎಂದು ತಿಳಿದು­­ಬಂದಿದೆ.

ಈ ಮಧ್ಯೆ,  ರಾಜನಾಥ್‌  ಅವರೂ ಪಕ್ಷ ಮತ್ತು ಸಂಘದ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿ­ದ್ದಾರೆ. ಈ ನಡುವೆ ಸುಷ್ಮಾ ಸ್ವರಾಜ್‌ ಅವರು  ಅಂಬಾಲ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.   ಜೋಷಿ ಅವರು ಮಧ್ಯಪ್ರದೇಶದ ಸಾಗರ್‌ನಲ್ಲಿ ಶುಕ್ರವಾರ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸ­ಬೇಕಿತ್ತು. ಆದರೆ, ಅವರಿಗೆ ರಾಜಧಾನಿ­ಯಲ್ಲಿಯೇ ಇರುವಂತೆ ಸೂಚಿಸಲಾ­ಗಿದೆ. ರಾಜ­ನಾಥ್‌ ಸಿಂಗ್, ಅಡ್ವಾಣಿ ಮತ್ತು ಮೋದಿ  ಅವರು ತಮ್ಮ ಉದ್ದೇಶಿತ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.

ಮೋದಿ ಪಟ್ಟಕ್ಕೆ ಒತ್ತಡ
ಸುಷ್ಮಾ, ಜೋಷಿ ಭೇಟಿ: ರಾಜನಾಥ್‌ ಸಿಂಗ್‌ ಅವರು ಸುಷ್ಮಾ ಸ್ವರಾಜ್‌ ಅವ­ರನ್ನು ಗುರು­ವಾರ ಸಂಜೆ ಭೇಟಿ­ಯಾಗಿ ಒಂದು ತಾಸು ಕಾಲ ಚರ್ಚಿಸಿ­ದರು. ಆದರೆ, ಸುಷ್ಮಾ ಅವರು ಈ ವಿಷಯ­ದಲ್ಲಿ ಅಡ್ವಾಣಿ ಅವ­ರೊಂದಿಗೆ ಇರುವು­ದಾಗಿ ಪುನರುಚ್ಚರಿಸಿ­ದರು ಎನ್ನಲಾ­ಗಿದೆ. ಮತ್ತೊಬ್ಬ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅವ­ರನ್ನೂ ರಾಜನಾಥ್‌ ಭೇಟಿ ಮಾಡಿ­ದ್ದರು. ಈ ವಿಷಯದಲ್ಲಿ ಬಹು­ಮತ ನಿರ್ಧಾರದ ಪರ ನಿಲ್ಲುವುದಾಗಿ ಜೋಷಿ ಅರೆಮನಸ್ಸಿನಿಂದ ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟಾದರೂ ರಾಜನಾಥ್‌  ಅವರು, ‘ಮೋದಿ ಅವರ ವಿಷಯದಲ್ಲಿ ಪಕ್ಷದಲ್ಲಿ ಯಾರೂ ಅಸಂತೋಷದಿಂದ ಇಲ್ಲ. ಯಾರೂ ಯಾವ ಷರತ್ತನ್ನು ಹಾಕಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾ­ವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾ­­­ವಣಾ ವಿಷಯ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಆಗಿದೆ. ಆದರೆ, ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಂಬಿಸಿದರೆ ಈ ವಿಷಯಗಳು ಗೌಣವಾಗಿ ಮೋದಿ ಅವರೇ ಚುನಾ­ವಣೆಯ ಕೇಂದ್ರಬಿಂದು ವಾಗುತ್ತಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆ­ಯಾದರೂ ಆಗಬಹುದು ಎಂದು ಅಡ್ವಾಣಿ ಅವರು ಪಕ್ಷದ ಹಿರಿಯ ಮುಖಂಡರ ಬಳಿ ಹೇಳಿಕೊಂಡಿದ್ದಾರೆ. ಆದ್ದರಿಂದಲೇ ಅವರು ಮೋದಿ ಅವರ ವಿಷಯದಲ್ಲಿ ತೊಡರುಗಾಲು ಹಾಕಿ­ದ್ದಾರೆ ಎನ್ನಲಾ­ಗಿದೆ. ಆದರೆ, ಅಡ್ವಾಣಿ ಅವರು ಯಾವುದೇ ವಿಷಯವನ್ನು ಬಹಿರಂಗ­ವಾಗಿ ಎಲ್ಲಿಯೂ ಹೇಳಿಲ್ಲ.

ಮೋದಿ ದೂಷಣೆ: ಈ ಮಧ್ಯೆ, ಅಡ್ವಾಣಿ ಅವರ ಆಪ್ತ ಸುಧೀಂದ್ರ ಕುಲಕರ್ಣಿ ಅವರು ಮೋದಿ ವಿರುದ್ಧ ಹರಿ­ಹಾಯ್ದಿದ್ದಾರೆ. ‘ಮೋದಿ ಅವರು ಸಮಾಜದಲ್ಲಿ ಮತ್ತು ಪಕ್ಷದಲ್ಲಿ ಒಂದು ಕಡೆಗೆ ಮಾತ್ರ ಧ್ರುವೀಕರಣ ಉಂಟು ಮಾಡುವ ನಾಯಕ. ಅವರು ಪ್ರಧಾನಿ­ಯಾದರೆ ಸ್ಥಿರ ಮತ್ತು ಪರಿಣಾಮ­ಕಾರಿ ಸರ್ಕಾರ­ವನ್ನು ಅವರಿಂದ ನೀಡಲು ಸಾಧ್ಯವಾಗು­ವುದು ಅನುಮಾನ’ ಎಂದಿದ್ದಾರೆ.

ಅಡ್ವಾಣಿ ವಿರುದ್ಧ ಟೀಕೆ: ಬಿಹಾರದ ಮಾಜಿ ಉಪ­ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ಅಡ್ವಾಣಿ ಅವರನ್ನು ದೂಷಿಸಿದ್ದಾರೆ. ‘ಅಡ್ವಾಣಿ  ಜನರ ಒಲವು– ನಿಲುವನ್ನು ಗ್ರಹಿಸುವಲ್ಲಿ ವಿಫಲ­ರಾಗಿ­ದ್ದಾರೆ. ಈ ಹಿಂದೆ ಅಡ್ವಾಣಿ ಅವರೇ ವಾಜಪೇಯಿ ಅವರನ್ನು ಮುಂದಿನ ಪ್ರಧಾನಿ ಎಂದು ಘೋಷಿಸಿ­ದ್ದರು. ಅದೇ ರೀತಿಯಲ್ಲಿ ಅವರು ನರೇಂದ್ರ ಮೋದಿ ಅವರನ್ನೂ ಘೋಷಿಸ­ಬೇಕು’ ಎಂದಿ­ದ್ದಾರೆ. ಮಧ್ಯಪ್ರದೇಶ, ಛತ್ತೀಸಗಡ, ರಾಜ­ಸ್ತಾನ ಮತ್ತು ದೆಹಲಿ ವಿಧಾನ­ಸಭಾ ಚುನಾವಣೆಗೂ ಮೊದಲು ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಘೋಷಿಸು­ವು­ದಕ್ಕೆ ಸುಷ್ಮಾ ಸ್ವರಾಜ್‌, ಮುರಳಿ ಮನೋಹರ ಜೋಷಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT