ADVERTISEMENT

‘ಮೋದಿ ಭಾರತದ ಮುಖ್ಯ ವಿಭಜಕ ಎನ್ನುವುದೇ ತಪ್ಪು’

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:30 IST
Last Updated 12 ಮೇ 2019, 20:30 IST
   

‘ಭಾರತದ ಪ್ರಧಾನ ವಿಭಜಕ’ ಎಂಬ ಶೀರ್ಷಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೈಮ್‌ ವಾರಪತ್ರಿಕೆಯು ಪ್ರಕಟಿಸಿದ ಮುಖಪುಟ ಲೇಖನದ ಬಗ್ಗೆ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಶಾನವಾಜ್‌ ಹುಸೇನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರನ್ನು ಮೋದಿ ಅವರು ಎಂದೂ ತಾರತಮ್ಯದಿಂದ ಕಂಡಿಲ್ಲ ಎಂದು ‘ಪ್ರಜಾವಾಣಿ’ಯ ಅಭಯ ಕುಮಾರ್‌ಗೆ ನೀಡಿದ ಸಂದರ್ಶನದಲ್ಲಿ ಹುಸೇನ್‌ ಹೇಳಿದ್ದಾರೆ.

* ಅಲ್ಪಸಂಖ್ಯಾತರನ್ನು ಮೋದಿ ಅವರು ತಾರತಮ್ಯದಿಂದ ನೋಡುತ್ತಾರೆ ಎಂಬ ಗ್ರಹಿಕೆ ಇದೆ. ಅಂತರರಾಷ್ಟ್ರೀಯ ಮಾಧ್ಯಮದಲ್ಲಿಯೂ ಅವರನ್ನು ‘ಭಾರತದ ಪ್ರಧಾನ ವಿಭಜಕ’ ಎಂದು ಬಣ್ಣಿಸಲಾಗಿದೆ...

ಮೋದಿಯವರನ್ನು ಭಾರತದ ಪ್ರಧಾನ ವಿಭಜಕ ಎಂದು ಹೇಳುವುದೇ ತಪ್ಪು. ಮೂರು ದಶಕಗಳಿಂದ ನಾನು ಬಿಜೆಪಿಯಲ್ಲಿದ್ದೇನೆ. ಬಿಜೆಪಿಯಲ್ಲಿರುವ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡನಾಗಿ ನಾನು ಅತ್ಯಂತ ಜವಾಬ್ದಾರಿಯುತ
ವಾಗಿ ಹೇಳಬಲ್ಲೆ, ಮೋದಿ ಅವರು ‘ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌’ ತತ್ವದಲ್ಲಿ ಪ್ರಾಮಾಣಿಕವಾಗಿ ನಂಬಿಕೆ ಇಟ್ಟಿದ್ದಾರೆ.

ADVERTISEMENT

*ಮೋದಿ ಅವರ ಐದು ವರ್ಷಗಳ ಆಳ್ವಿಕೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗುಂಪು ಹಲ್ಲೆಗಳ ಹಲವು ಪ್ರಕರಣಗಳು ನಡೆದಿರುವಾಗಲೂ ಹೀಗೆ ಹೇಳಲು ಹೇಗೆ ಸಾಧ್ಯ?

ಕೆಲವೆಡೆ ಗುಂಪು ಹಲ್ಲೆಗಳು ನಡೆದಿರುವುದು ನಿಜ. ಹಾಗೆಯೇ, ಈ ಎಲ್ಲ ಘಟನೆಗಳನ್ನು ಪ್ರಧಾನಿ ಖಂಡಿಸಿರುವುದೂ ನಿಜ. ಅದರ ಪರಿಣಾಮವಾಗಿ ಅಂತಹ ಘಟನೆಗಳು
ಮರುಕಳಿಸಲಿಲ್ಲ.

* ಮುಸ್ಲಿಮರಿಗೆ ಬಿಜೆಪಿ ಬಗ್ಗೆ ಭಾರಿ ಸಿಟ್ಟು ಇದೆ ಎಂಬುದು ನಿಮಗೆ ಅರಿವಾಗಿದೆಯೇ...

ಮೋದಿ ಅವರು ಅಧಿಕಾರಕ್ಕೆ ಬಂದರೆ ಮುಸ್ಲಿಮರು ಭಾರಿ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂಬ ಭಾವನೆಯನ್ನು 2014ರ ಚುನಾವಣೆಗೆ ಮೊದಲು ಸೃಷ್ಟಿಸಲಾಗಿತ್ತು. ಆದರೆ, ಐದು ವರ್ಷಗಳಲ್ಲಿ ಒಂದೇ ಒಂದು ಗಲಭೆ ದೇಶದಲ್ಲಿ ನಡೆದಿಲ್ಲ. ಮೋದಿ ಅವರನ್ನು ಕೆಟ್ಟದಾಗಿ ಬಿಂಬಿಸಲು ಮಾಧ್ಯಮದ ಒಂದು ವರ್ಗ ಸದಾ ಕೆಲಸ ಮಾಡಿದೆ. ಈಗ ಅಂತರರಾಷ್ಟ್ರೀಯ ಮಾಧ್ಯಮ ಕೂಡ ಅದಕ್ಕೆ ಸೇರಿಕೊಂಡಿದೆ. ಇದು ಸರಿಯಲ್ಲ.

*ಹಿಂದೂ–ಮುಸ್ಲಿಮರು ಮಾತ್ರವಲ್ಲ, ಗೆಳೆಯರು, ಸಂಬಂಧಿಕರು ಮತ್ತು ಸಮಾಜದಲ್ಲಿ ಕೂಡ ಬಿಜೆಪಿ ವಿಭಜನೆಯ ಬೀಜ ಬಿತ್ತಿದೆ. ಇದನ್ನು ರಾಷ್ಟ್ರೀಯ ಮಾಧ್ಯಮಗಳು ತೋರಿಸಿಲ್ಲ ಎಂಬ ಕಾರಣಕ್ಕೆ ಅಂತರರಾಷ್ಟ್ರೀಯ ಮಾಧ್ಯಮ ಬೆಳಕು ಚೆಲ್ಲಿದೆ...

ಇದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಯಾರ ಬಗ್ಗೆಯಾದರೂ ಮೋದಿ ಅವರು ತಾರತಮ್ಯ ಯಾಕೆ ತೋರಬೇಕು? ಅವರು ಆರಂಭಿಸಿದ ಆಯುಷ್ಮಾನ್‌ ಭಾರತ ಯೋಜನೆಯು ಹಿಂದೂ ಮತ್ತು ಮುಸ್ಲಿಮರ ನಡುವೆ ತಾರತಮ್ಯ ತೋರಿದೆಯೇ? ಹಾಗೆಯೇ, ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳನ್ನು ಧರ್ಮದ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆಯೇ?

* ತಾರತಮ್ಯದ ಬಹುದೊಡ್ಡ ಉದಾಹರಣೆ ನೀವೇ. ಬಿಜೆಪಿಯ ಪ್ರಮುಖ ಮುಸ್ಲಿಂ ನಾಯಕನಾಗಿದ್ದರೂ ನಿಮಗೆ ಟಿಕೆಟ್‌ ನಿರಾಕರಿಸಲಾಗಿದೆ. ವಾಸ್ತವದಲ್ಲಿ ಯಾವ ಮುಸ್ಲಿಂ ಅಭ್ಯರ್ಥಿಗೂ ಬಿಜೆಪಿ ಟಿಕೆಟ್‌ ನೀಡಿಲ್ಲ...

ಇದು ತಪ್ಪು. ಕೇರಳದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ. ನನ್ನ ವಿಚಾರದಲ್ಲಿ ಹೇಳುವುದಾದರೆ, 2014ರ ಚುನಾವಣೆಯಲ್ಲಿ ನಾನು ಸೋತಿದ್ದೆ. ಹಾಗಾಗಿ ಆ ಕ್ಷೇತ್ರ ನಮ್ಮ ಮೈತ್ರಿ ಪಾಲುದಾರ ಪಕ್ಷವಾದ ಜೆಡಿಯುಗೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.