ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಒಳಪಡಿಸಲು ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿಇಸಿ) ಶಿಫಾರಸು ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್ ನಿರ್ಧಾರ ಕೈಗೊಳ್ಳುವ ತನಕ, ಅವರಿಗೆ ಸ್ಥಾನಮಾನ ನೀಡುವ ವಿಷಯದಲ್ಲಿ ಕಾದು ನೋಡುವ ತಂತ್ರ ಅನುಸರಿಸಲು ಬಿಜೆಪಿ ಕೇಂದ್ರ ನಾಯಕತ್ವ ನಿರ್ಧರಿಸಿದೆ.
ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ಬಗ್ಗೆ ತೀರ್ಮಾನಕ್ಕೆ ಬರುವ ಮುನ್ನ ಸುಪ್ರೀಂಕೋರ್ಟ್ ನಿರ್ಧಾರವನ್ನು ಪಕ್ಷ ಕಾದು ನೋಡಲಿದೆ ಎಂದು ಪಕ್ಷದ ಉನ್ನತ ನಾಯಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ಹಸಿರು ಪೀಠವು, ಸಿಇಸಿ ಶಿಫಾರಸಿನ ಬಗ್ಗೆ ಶುಕ್ರವಾರ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿತ್ತು. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸಿದ ಕರ್ನಾಟಕದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಶೇಷ ಮನವಿ ಅರ್ಜಿಯನ್ನು ಏ.23ರಂದು ಕೈಗೊಳ್ಳುವುದಾಗಿ ಇದೇ ವೇಳೆ ನ್ಯಾಯಪೀಠ ಪ್ರಕಟಿಸಿತ್ತು.
ಜೆಡಿಎಸ್ ಕಾರ್ಯಕರ್ತ ಡಿ.ಎಂ.ವಿಶ್ವನಾಥ್ ಎಂಬುವರು ಈ ಅರ್ಜಿ ಸಲ್ಲಿಸಿದ್ದಾರೆ. ಖಾಸಗಿ ಗಣಿ ಕಂಪೆನಿಯೊಂದು ಯಡಿಯೂರಪ್ಪ ಕುಟುಂಬದವರಿಗೆ ಸೇರಿದ ಟ್ರಸ್ಟ್‌ಗೆ ಹಣ ಸಂದಾಯ ಮಾಡಿದ ಸಂದರ್ಭಗಳನ್ನು ಪರಿಗಣಿಸಲು ಅವಕಾಶ ಕಲ್ಪಿಸುವ ಲೋಕಾಯುಕ್ತ ಕಾಯಿದೆಯ 22ನೇ ಅಧ್ಯಾಯವನ್ನು ಕಡೆಗಣಿಸಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಅರ್ಜಿಯಲ್ಲಿ ಆಕ್ಷೇಪ ಎತ್ತಲಾಗಿದೆ.
ಸಿಇಸಿ ವರದಿ ಸಲ್ಲಿಕೆಯಾದ ನಂತರ ಯಡಿಯೂರಪ್ಪ ಪರ ಇರುವ ಕೇಂದ್ರ ನಾಯಕರು ಕಳೆಗುಂದಿರುವುದು ಗೋಚರಿಸುತ್ತಿದೆ. ಪಕ್ಷದ ವಿದ್ಯಮಾನಗಳ ಕರ್ನಾಟಕ ಮೇಲ್ವಿಚಾರಕರಾದ ಧರ್ಮೇಂದ್ರ ಪ್ರಧಾನ್ ವರಿಷ್ಠರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಇನ್ನು ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆಂಬ ದಟ್ಟ ವದಂತಿ ಹಬ್ಬಿದೆ. ಆದರೆ ಪಕ್ಷದ ಪ್ರಮುಖರು ಈ ಕುರಿತು ಬಾಯಿಬಿಡಲು ನಿರಾಕರಿಸುತ್ತಿದ್ದಾರೆ.
ಆದರೆ ಕೆಲವು ನಾಯಕರು, ಯಡಿಯೂರಪ್ಪ ಅವರು ಸಂಕಷ್ಟಕ್ಕೆ ಸಿಲುಕಿದ್ದರೂ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರ ವರ್ಚಸ್ಸಿನ ಲಾಭ ಪಡೆಯಬಹುದು ಎಂಬ ಅಭಿಪ್ರಾಯ ಹೊಂದಿದ್ದಾರೆ.
ಆದರೆ ಪಕ್ಷವು ಏ.24ರಿಂದ (ಮಂಗಳವಾರ) ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ತಯಾರಾಗುತ್ತಿದ್ದು, ಈ ಹಂತದಲ್ಲಿ ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಯಾವುದೇ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಪಕ್ಷದ ವಿದ್ಯಮಾನಗಳ ಕರ್ನಾಟಕ ಮೇಲ್ವಿಚಾರಕರಾದ ಧರ್ಮೇಂದ್ರ ಪ್ರಧಾನ್ ಅವರು ವರಿಷ್ಠರ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಇನ್ನು ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆಂಬ ದಟ್ಟ ವದಂತಿ ಹಬ್ಬಿದೆ. ಆದರೆ ಪಕ್ಷದ ಪ್ರಮುಖರು ಈ ಕುರಿತು ಬಾಯಿಬಿಡಲು ನಿರಾಕರಿಸುತ್ತಿದ್ದಾರೆ.
ಸಿಇಸಿ ವರದಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಸ್ವಲ್ಪ ಬಾಗಬಹುದೆಂಬುದು ಕೇಂದ್ರದ ನಾಯಕರ ನಿರೀಕ್ಷೆಯಾಗಿದೆ. ಹೀಗಾಗಿ ಇದೇ ಸಂದರ್ಭ ಬಳಸಿಕೊಂಡು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಹೊಣೆಯನ್ನು ರಾಜ್ಯ ನಾಯಕರಿಗೇ ವಹಿಸುವ ಯೋಚನೆಯೂ ಅವರ ತಲೆಯಲ್ಲಿ ಸುಳಿದಾಡುತ್ತಿದೆ. ಸಂಪುಟ ವಿಸ್ತರಣೆ ನಿರ್ಧಾರವನ್ನೂ ರಾಜ್ಯ ನಾಯಕರಿಗೇ ವಹಿಸುವ ಲೆಕ್ಕಾಚಾರ ಕೂಡ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.