ADVERTISEMENT

ಯಮುನಾ ನದಿ ತೀರಕ್ಕೆ ಧಕ್ಕೆ

‘ಆರ್ಟ್‌ ಆಫ್‌ ಲಿವಿಂಗ್‌’ನ ವಿಶ್ವ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:30 IST
Last Updated 17 ಆಗಸ್ಟ್ 2016, 19:30 IST
ಯಮುನಾ ನದಿ ತೀರಕ್ಕೆ ಧಕ್ಕೆ
ಯಮುನಾ ನದಿ ತೀರಕ್ಕೆ ಧಕ್ಕೆ   

ನವದೆಹಲಿ (ಪಿಟಿಐ): ಯಮುನಾ ನದಿ ದಂಡೆಯ ಮೇಲೆ ‘ಆರ್ಟ್‌ ಆಫ್‌ ಲಿವಿಂಗ್‌’ (ಎಒಎಲ್‌) ಸಂಸ್ಥೆ ಆಯೋಜಿಸಿದ್ದ ‘ವಿಶ್ವ ಸಂಸ್ಕೃತಿ ಉತ್ಸವ’ ಕಾರ್ಯಕ್ರಮವು ನದಿ ದಂಡೆಯ ಸ್ವರೂಪವನ್ನು ಸಂಪೂರ್ಣವಾಗಿ ನಾಶಗೊಳಿಸಿದೆ ಎಂದು  ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ತಜ್ಞರ ಸಮಿತಿ ವರದಿ ನೀಡಿದೆ.

ಶ್ರೀ ಶ್ರೀ ರವಿಶಂಕರ್ ಅವರು ಬೆಂಗಳೂರು ಮೂಲದ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಮುಖ್ಯಸ್ಥರು.
‘ಉತ್ಸವದ ಮುಖ್ಯ ಕಾರ್ಯಕ್ರಮ ನಡೆದ ನದಿಯಂಚಿನ ಪ್ರದೇಶಕ್ಕೆ ಧಕ್ಕೆ ಆಗಿರುವುದೊಂದೇ ಅಲ್ಲ, ಅದು ಸಂಪೂರ್ಣವಾಗಿ ನಾಶವಾಗಿರುವುದನ್ನು ಸಮಿತಿ ಕಂಡುಕೊಂಡಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಬೃಹತ್ ವೇದಿಕೆ ನಿರ್ಮಿಸಿದ ಜಾಗ ಮತ್ತು ಅದರ ಹಿಂದಿರುವ ಜಾಗದಲ್ಲಿ ಹೊರಗಿನಿಂದ ಏನೋ ತಂದು, ನೆಲ ಗಟ್ಟಿ ಮಾಡಲಾಗಿದೆ. ಡಿಎನ್‌ಡಿ ಮೇಲ್ಸೇತುವೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಇಳಿಜಾರು ನಿರ್ಮಿಸಲು ಭಾರಿ ಪ್ರಮಾಣದಲ್ಲಿ ಘನ ವಸ್ತುಗಳನ್ನು ಸುರಿಯಲಾಗಿದೆ. ಬಾರಾಪುಲ್ಲಾ ಕಾಲುವೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ಸೇತುವೆ ನಿರ್ಮಿಸುವಲ್ಲೂ ಇದೇ ರೀತಿ ಮಾಡಲಾಗಿದೆ’ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಪೀಠಕ್ಕೆ ವರದಿಯನ್ನು ಸಲ್ಲಿಸಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದ ವಿಶ್ವ ಸಂಸ್ಕೃತಿ ಉತ್ಸವದ ಸ್ಥಳ ಪರಿಶೀಲನೆಗೆ ಎನ್‌ಜಿಟಿ ಪೀಠವು ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ಸಮಿತಿ ರಚಿಸಿತ್ತು. ದೆಹಲಿ ಐಐಟಿಯ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳೂ ಈ ಸಮಿತಿಯಲ್ಲಿದ್ದರು.

ಮೂರು ದಿನಗಳ ಕಾರ್ಯಕ್ರಮದ ಕಾರಣ ನದಿಯಂಚಿನ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿದ್ದ ಮರಗಳು, ಪೊದೆಗಳು, ಎತ್ತರದ ಹುಲ್ಲುಗಳು, ನೀರಿನಲ್ಲಿ ಬೆಳೆಯುವ ಸಸ್ಯಗಳು ನಾಶವಾಗಿವೆ ಎಂದು  ವರದಿ ವಿವರಿಸಿದೆ.
ಅಲ್ಲಿ ನಡೆದ ತೀವ್ರ ಪ್ರಮಾಣದ ಮಾನವ ಚಟುವಟಿಕೆಯ ಕಾರಣದಿಂದ, ಸೂಕ್ಷ್ಮ ಜೀವಿಗಳು ನೆಲೆ ಕಳೆದುಕೊಂಡಿವೆ. ಕೆಲ ಜೀವಿಗಳು ತ್ಯಾಜ್ಯದ ಅಡಿ ಸಮಾಧಿಯಾಗಿವೆ. ಇದು ಅಲ್ಲಿನ ಜೀವವೈವಿಧ್ಯಕ್ಕೆ ಆಗಿರುವ ಅಗೋಚರ ನಷ್ಟ. ಅಲ್ಲಿ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜಿಸುವುದು ಸುಲಭವಲ್ಲ. ನೆಲೆ ಕಳೆದುಕೊಂಡ ಜೀವಿಗಳಲ್ಲಿ ಹೆಚ್ಚಿನವು ಮುಂದೆಂದೂ ಅಲ್ಲಿಗೆ ಮರಳಲಾರವು. ಪರಿಸರ ವ್ಯವಸ್ಥೆಗೆ ಅಗತ್ಯವಾಗಿರುವ ಅತಿ ಸೂಕ್ಷ್ಮ ಜೀವಿಗಳಲ್ಲಿ ಇನ್ನಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಸಮಿತಿ ಹೇಳಿದ್ದು...
* ಕಾರ್ಯಕ್ರಮ ನಡೆದ ಜಾಗವನ್ನು ಸಮತಟ್ಟು ಮಾಡಲಾಗಿದೆ. ಅಲ್ಲಿನ ಮಣ್ಣನ್ನು ಗಟ್ಟಿ ಮಾಡಲಾಗಿದೆ. ಅಲ್ಲಿ ಈಗ ಹಸಿರು ಇಲ್ಲ
* ನದಿಯಂಚಿನಲ್ಲಿ ನೆಲೆ ಕಂಡುಕೊಂಡಿದ್ದ ಸೂಕ್ಷ್ಮ ಜೀವಿಗಳು ಈಗ ಕಾಣುತ್ತಿಲ್ಲ
* ಆಗಿರುವ ನಷ್ಟವನ್ನು ಸುಲಭದಲ್ಲಿ ಅಂದಾಜಿಸಲಾಗದು. 

‘ವರದಿ ಅವೈಜ್ಞಾನಿಕ’
ಬೆಂಗಳೂರು:
ಯಮುನಾ ನದಿ ದಡದಲ್ಲಿ ನಡೆದ ‘ವಿಶ್ವ ಸಂಸ್ಕೃತಿ ಉತ್ಸವ’ದಿಂದ ಪರಿಸರಕ್ಕೆ ಹಾನಿಯಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೀಡಿರುವ ವರದಿ ಅವೈಜ್ಞಾನಿಕ’ ಎಂದು ಆರ್ಟ್ ಆಫ್ ಲಿವಿಂಗ್‌ನ ಪರಿಸರ ತಜ್ಞ ಡಾ. ಪ್ರಭಾಕರ ರಾವ್‌ ದೂರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ‘ಪರಿಸರದ ಮೇಲೆ ಯಾವುದೇ ಹಾನಿಯಾಗದಂತೆ ಆರ್ಟ್ ಆಫ್ ಲಿವಿಂಗ್ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

‘ಕಾರ್ಯಕ್ರಮ ನಡೆದ ಸ್ಥಳವನ್ನು ಸಮಿತಿಯು ಕೇವಲ 45 ನಿಮಿಷ ಪರಿಶೀಲಿಸಿ, ₹ 120 ಕೋಟಿ ಹಾನಿ ಆಗಿದೆ ಎಂದು ಹೇಳುವುದು ಅವೈಜ್ಞಾನಿಕ. ಇದು ಯಾವ ರೀತಿ ಹಾನಿಯಾಗಿದೆ ಎಂಬುದನ್ನು ನಿಖರವಾಗಿ ಸಮಿತಿ ಹೇಳಿಲ್ಲ’ ಎಂದು ತಿಳಿಸಿದರು.

‘ಕಾರ್ಯಕ್ರಮಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡಿ, ರಸ್ತೆ ನಿರ್ಮಿಸಲಾಗಿದೆ ಎಂಬ ತಪ್ಪು ಮಾಹಿತಿ ವರದಿಯಲ್ಲಿದೆ. ಆದರೆ ಇದು ಸತ್ಯವಲ್ಲ. ಯಮುನಾ ನದಿ ದಡ ಆಗಾಗ್ಗೆ ಪ್ರವಾಹಕ್ಕೊಳಗಾಗುವ ಪ್ರದೇಶವಾಗಿದ್ದು, ಇದು ಮರಳು ಮಿಶ್ರಿತ ನದಿ ದಡದ ಮೈದಾನವಾಗಿದೆ. ಹೀಗಾಗಿ ಇಲ್ಲಿ ಯಾವುದೇ ಜಲಚರಗಳಾಗಲಿ, ಮರಗಳಾಗಲಿ ಇಲ್ಲ. ಹೀಗಾಗಿ ಕಾರ್ಯಕ್ರಮ ನಡೆಸಲು ಪರಿಸರ ಇಲಾಖೆಯ ಅನುಮತಿ ಅಗತ್ಯವಿರಲಿಲ್ಲ’ ಎಂದು ಹೇಳಿದರು.

‘ಕಾರ್ಯಕ್ರಮಕ್ಕಾಗಿ ಯಮುನಾ ನದಿ ದಡವನ್ನು ಹಾಳು ಮಾಡಿಲ್ಲ. ವೈಜ್ಞಾನಿಕ ಸಮಿತಿ ಹೇಳಿದಂತೆ ಅಲ್ಲಿ ಕೊಳ ಅಥವಾ ಜಲಚರಗಳೂ ಇರಲಿಲ್ಲ. ಸಮಿತಿಯ ವರದಿ ಹಲವು ತಪ್ಪುಗಳಿಂದ ಕೂಡಿದೆ’ ಎಂದು ದೂರಿದರು.

‘2000ನೇ ಇಸವಿಯಲ್ಲಿ ತೆಗೆದ ಉಪಗ್ರಹ ಚಿತ್ರವೊಂದು, ಆ ಜಾಗದಲ್ಲಿ ಇಳಿಜಾರು ಮತ್ತು ರಸ್ತೆ ಇರುವುದನ್ನು ತೋರಿಸುತ್ತದೆ. ಆದರೆ ಈಗ ಸಮಿತಿಯು ಇಳಿಜಾರು ಮತ್ತು ರಸ್ತೆಯನ್ನು ಸಂಸ್ಥೆ ನಿರ್ಮಿಸಿದೆ ಎಂದು ಹೇಳುವುದು ತಪ್ಪು’ ಎಂದು ಎಒಎಲ್‌ ಪ್ರಕಟಣೆ ತಿಳಿಸಿದೆ.

ADVERTISEMENT

ಈ ಜಾಗದಲ್ಲಿ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಜಾಗವನ್ನು ಸಮತಟ್ಟು ಮಾಡಿದ್ದು ರೈತರು ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.