ADVERTISEMENT

ಯುಐಡಿಐಎ ‘ಸುಪ್ರೀಂ’ನಲ್ಲಿ ಮೇಲ್ಮನವಿ

ದತ್ತಾಂಶ ಹಸ್ತಾಂತರ ವಿವಾದ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ನವದೆಹಲಿ: ಗೋವಾದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದ ತನಿಖೆ ಮಾಡು­ತ್ತಿ­ರುವ ಸಿಬಿಐಗೆ ಜನರಿಂದ ಸಂಗ್ರಹಿಸಿ­ರುವ ಬಯೊಮೆಟ್ರಿಕ್ ದತ್ತಾಂಶ­ಗಳನ್ನು ಒದಗಿಸಬೇಕು ಎಂದು ಬಾಂಬೆ ಹೈಕೋರ್ಟ್ ಪಣಜಿ ಪೀಠವು  ಹೊರಡಿ­ಸಿ­ರುವ ಆಜ್ಞೆಯ ವಿರುದ್ಧ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಐಎ)ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಬಾಂಬೈ ಹೈಕೋರ್ಟ್‌ನ ಪಣಜಿ ಪೀಠವು ಕಳೆದ ಫೆಬ್ರುವರಿ 26ರಂದು ಮಧ್ಯಂತರ ಆದೇಶ ಹೊರಡಿಸಿ ಯುಐಡಿಐಎ ಸಂಗ್ರಹಿಸಿರುವ ಎಲೆ­ಕ್ಟ್ರಾನಿಕ್‌ ಬೆರಳಚ್ಚು ತಾಳೆಯಾಗುತ್ತ­ದೆಯೇ ಎಂಬುದನ್ನು ಪತ್ತೆಹಚ್ಚಲು ತಜ್ಞರನ್ನು ನೇಮಕ ಮಾಡುವಂತೆ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲ­ಯದ ಮಹಾ ನಿರ್ದೇಶಕರಿಗೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಯುಐಡಿಐಎ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿ, ಪಣಜಿ ಪೀಠದ ಆದೇಶವನ್ನು ಪಾಲಿಸಿ­ದರೆ ಪೊಲೀಸ್‌ ಸೇರಿದಂತೆ ಇತರ ತನಿಖಾ ಸಂಸ್ಥೆಗಳೂ ದತ್ತಾಂಶವನ್ನು ನೀಡು­ವಂತೆ ಕೋರುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದೆ.

ನಾಗರಿಕರ ವೈಯಕ್ತಿಕ ಮಾಹಿತಿ­ಗಳನ್ನು ಅವರ ಅನುಮತಿ ಇಲ್ಲದೆ ಈ ರೀತಿ ಹಂಚಿಕೊಳ್ಳಲು ಪ್ರಸಕ್ತ ನೀತಿಯಲ್ಲಿ ಅವಕಾಶವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಡೆಮೊಗ್ರಾಫಿಕ್‌ ಮತ್ತು ಬಯೋ­ಮೆಟ್ರಿಕ್‌ ಮಾಹಿತಿಗಳನ್ನು ನೀಡುವ ಮೂಲಕ ಈಗಾಗಲೇ 60 ಕೋಟಿ ನಾಗರಿಕರು ಆಧಾರ ಗುರುತಿನ ಚೀಟಿ ಪಡೆದಿದ್ದಾರೆ. ಅವರ ವೈಯಕ್ತಿಕ ಮಾಹಿತಿಗ­ಳನ್ನು ಬಹಿರಂಗಪಡಿಸು­ವುದು ಅಪಾಯ­ಕಾರಿ ಮತ್ತು ಮೂಲ­ಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿ­ದಂತೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಖಾಸಗಿತನದ ಹಕ್ಕು ಮೂಲಭೂತ ಮಾನವ ಹಕ್ಕುಗಳಲ್ಲಿ ಒಂದು. ಈ ಹಕ್ಕನ್ನು ರಕ್ಷಿಸುವುದು ಯುಐಡಿಐಎ ಕರ್ತವ್ಯ. ಆದ್ದರಿಂದ ದತ್ತಾಂಶವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಎಸ್‌. ಪುಟ್ಟಸ್ವಾಮಿ ಸೇರಿದಂತೆ ಅನೇಕರು ಈಗಾಗಲೇ ಯುಐಡಿಐಎ ದತ್ತಾಂಶ ಸಂಗ್ರಹದ ಔಚಿತ್ಯವನ್ನು ಪ್ರಶ್ನಿಸಿ  ಸುಪ್ರೀಂಕೋರ್ಟ್‌­ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ­ಗಳನ್ನು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.