ADVERTISEMENT

ಯೋಗ ಗುರು ಅವಿನಾಶ್ ಪೊಲೀಸ್ ವಶಕ್ಕೆ

ಬಿಎಸ್‌ಪಿ ಮುಖಂಡ ಭಾರದ್ವಾಜ್ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಇಂದೋರ್(ಪಿಟಿಐ): ಬಹುಜನ ಸಮಾಜ ಪಕ್ಷದ ಮುಖಂಡ ದೀಪಕ್ ಭಾರದ್ವಾಜ್ ಅವರ ಕೊಲೆಗೆ ಸಂಬಂಧಿಸಿದಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಯೋಗ ಗುರು ಅವಿನಾಶ್ ಶಾಸ್ತ್ರಿ ಎಂಬುವವರನ್ನು ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.ಅವಿನಾಶ್ ಶಾಸ್ತ್ರಿ `ಅಧ್ಯಾತ್ಮ ಗುರು'ವಿನ ಕೇಂದ್ರದಲ್ಲಿ ಯೋಗ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಎಸ್‌ಪಿ ಮುಖಂಡ ದೀಪಕ್ ಭಾರದ್ವಾಜ್ ಅವರ ಕೊಲೆ ಭೂ ವ್ಯಾಜ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದ್ದು ಅವಿನಾಶ್ ಭಾಗಿಯಾಗಿದ್ದಾರೆ ಎಂದು ಶಂಕಿಸಿ ಕಳೆದ ರಾತ್ರಿ ಇಲ್ಲಿನ ವಿಮಾನ ನಿಲ್ದಾಣದ ಹತ್ತಿರವಿರುವ `ಉಮಾನಂದ ಪಾರಮಾರ್ಥಿಕ ನ್ಯಾಸ ಆಶ್ರಮ'ದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

`ಅವಿನಾಶ್ ಶಾಸ್ತ್ರಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೆಹಲಿ ಅಪರಾಧ ವಿಭಾಗದ ಪೊಲೀಸರ ತಂಡ ಶಾಸ್ತ್ರಿ ಅವರನ್ನು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ವಿಚಾರ ನಡೆಸುತ್ತಿದೆ' ಎಂದು ವಿಮಾನನಿಲ್ದಾಣದ ಪೊಲೀಸ್ ಠಾಣೆಯ ಅಧಿಕಾರಿ ಅಖಿಲೇಶ್ ದ್ವಿವೇದಿ ತಿಳಿಸಿದ್ದಾರೆ.


`ಶಾಸ್ತ್ರಿ ಅಧ್ಯಾತ್ಮ ಗುರುವಿನ ಆಪ್ತರಲ್ಲಿ ಒಬ್ಬರು. ಅವರು ಮುಖ್ಯ ಆರೋಪಿಯ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ' ಎಂದುದೆಹಲಿ ಅಪರಾಧ ವಿಭಾಗ ನೀಡಿರುವ ಹೇಳಿಕೆ ಉಲ್ಲೇಖಿಸಿ ದ್ವಿವೇದಿ ತಿಳಿಸಿದ್ದಾರೆ.

`ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾನಂದ ಅವರು ನಡೆಸುತ್ತಿರುವ ಆಶ್ರಮದ ಫೋನ್ ಕರೆಗಳ ಜಾಡು ಹಿಡಿದು ಪೊಲೀಸರ ತಂಡವು ವಿಚಾರಣೆ ನಡೆಸಲು ಕೆಲದಿನಗಳ ಹಿಂದೆಯೇ ನಗರಕ್ಕೆ ಬಂದಿತ್ತು. ಪೊಲೀಸರ ತಂಡ ಗುರುವಾರ ರಾತ್ರಿ ಆಶ್ರಮದ ಮೇಲೆ ದಾಳಿ ಮಾಡಿದಾಗ ಉಮಾನಂದ ಕಾಣೆಯಾಗಿದ್ದರು' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT