ADVERTISEMENT

ರದ್ದತಿ ಕೋರಿದ್ದ ಅಭ್ಯರ್ಥಿ ಮೇಲ್ಮನವಿ ವಜಾ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST

ನವದೆಹಲಿ: ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರಾಜ್ಯದ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ 60 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ನಿಯಮಗಳ ಅರ್ಹತೆಯನ್ನು ಪ್ರಶ್ನಿಸಿ ಧಾರವಾಡದ ವಕೀಲೆ ಭಾರತಿ ಭಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ರಾಜ್ಯ ಹೈಕೋರ್ಟ್‌ ಕಳೆದ ನವೆಂಬರ್‌ 23ರಂದು ಆದೇಶ ನೀಡಿತ್ತು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠ ಈ ನಿರ್ಧಾರ ಕೈಗೊಂಡಿದೆ.

ADVERTISEMENT

ಜಿಲ್ಲಾ ನ್ಯಾಯಾಧೀಶರ ಹುದ್ದೆಯ ನೇಮಕಕ್ಕಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಲಿಖಿತ ಪರೀಕ್ಷೆಯಲ್ಲಿ 163 ಅಂಕ ಗಳಿಸಿದರೂ ನವೆಂಬರ್‌ 27ರಿಂದ ಡಿಸೆಂಬರ್‌ 8ರ ವರೆಗೆ ನಡೆಯಲಿರುವ ಮೌಖಿಕ ಪರೀಕ್ಷೆಗೆ ತಮ್ಮನ್ನು ಪರಿಗಣಿಸಿಲ್ಲ ಎಂದು ಭಾರತಿ ದೂರಿದ್ದರು.

ಸಾಮಾನ್ಯ ಅಭ್ಯರ್ಥಿಗಳಿಗೆ 12 ಹುದ್ದೆಗಳು ಮೀಸಲಿದ್ದು, ಲಿಖಿತ ಪರೀಕ್ಷೆಯ ಒಟ್ಟಾರೆ ಅಂಕಗಳನ್ನು ಮೌಖಿಕ ಪರೀಕ್ಷೆಗೆ ಪರಿಗಣಿಸಲಾಗಿಲ್ಲ. ಅಲ್ಲದೆ, ಕರ್ನಾಟಕ ನ್ಯಾಯಾಂಗ ಸೇವೆ (ನೇಮಕಾತಿ) ನಿಯಮಗಳು ಅಸಂವಿಧಾನಿಕವಾಗಿವೆ ಎಂದು ಎಂದು ಅವರು ಮನವಿ ಆರೋಪಿಸಿದ್ದರು.

ಆದರೆ, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಪರಿಗಣನೆಯ ವಲಯದಲ್ಲಿ ಸೇರದ್ದರಿಂದ ಭಾರತಿ ಅವರನ್ನು ಮೌಖಿಕ ಪರೀಕ್ಷೆಗೆ ಪರಿಗಣಿಸಲಾಗಿಲ್ಲ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.