ADVERTISEMENT

ರಾಜಾ ಇತರರ ವಿರುದ್ಧ ವಿಶ್ವಾಸಭಂಗದ ಹೊಸ ಆರೋಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 9:50 IST
Last Updated 26 ಸೆಪ್ಟೆಂಬರ್ 2011, 9:50 IST

ನವದೆಹಲಿ (ಪಿಟಿಐ): ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಇತರ ಇಬ್ಬರ ವಿರುದ್ಧ 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ~ಸಾರ್ವಜನಿಕ ಸೇವಕರಿಂದ ವಿಶ್ವಾಸಭಂಗ~ದ ಹೊಸ ಆಪಾದನೆಗಳನ್ನು ಸಿಬಿಐ ಸೋಮವಾರ ಮಾಡಿದೆ.

ನಿಯೋಜಿತ ವಿಶೇಷ ಸಿಬಿಐ ನ್ಯಾಯಾಧೀಶ ಓ.ಪಿ. ಸೈನಿ ಅವರ ಮುಂದೆ ವಿಶೇಷ ಅರ್ಜಿಯನ್ನು ಸಲ್ಲಿಸಿದ ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಯು.ಯು. ಲಲಿತ್ ಅವರು ಭಾರತೀಯ ದಂಡ ಸಂಹಿತೆಯ 409ನೇ ವಿಧಿಯ ಅಡಿಯಲ್ಲಿ ವಿಶ್ವಾಸ ಭಂಗದ ಪ್ರಕರಣವನ್ನು ರಾಜಾ ಮತ್ತು ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ ಹಾಗೂ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಅವರ ವಿರುದ್ಧ ~ಖಂಡಿತವಾಗಿ ದಾಖಲಿಸಬಹುದು~ ಎಂದು ಪ್ರತಿಪಾದಿಸಿದರು.

ರಾಜಾ ಮತ್ತು ಇತರ ಇಬ್ಬರು ಮಾಜಿ ಅಧಿಕಾರಿಗಳಲ್ಲದೆ ಡಿಎಂಕೆ ಸಂಸದೆ ಕನಿಮೋಳಿ ಮತ್ತು ಮೂರು ದೂರಸಂಪರ್ಕ ಸಂಸ್ಥೆಗಳು ಸೇರಿದಂತೆ ಇತರ ಎಲ್ಲ ಆರೋಪಿಗಳ ವಿರುದ್ಧವೂ 409ನೇ ವಿಧಿಯ ಅಡಿಯಲ್ಲಿ ವಿಶ್ವಾಸಭಂಗ ಮತ್ತು 120ನೇ ವಿಧಿಯ ಅಡಿಯಲ್ಲಿ ಕ್ರಿಮಿನಲ್ ಒಳಸಂಚು ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿದರು.

1, 2 ಮತ್ತು 3ನೇ ಆರೋಪಿಗಳಾದ ರಾಜಾ, ಬೆಹುರಾ ಮತ್ತು ಚಂಡೋಲಿಯಾ ಸಾರ್ವಜನಿಕ ಸೇವಕರಾಗಿದ್ದು ತಮ್ಮ ಹುದ್ದೆಯ ಬಲದಿಂದ 2 ಜಿ ತರಂಗಾಂತರ ಹಂಚಿಕೆ ವಿಚಾರದಲ್ಲಿ ಪ್ರಭುತ್ವ ಹೊಂದಿದ್ದವರು ಎಂದು ಎಂದು ಲಲಿತ್ ಹೇಳಿದರು.  

ಈ ಆರೋಪಿತ ಸಾರ್ವಜನಿಕ ಸೇವಕರು ಒಳಸಂಚು ನಡೆಸಿ, ನಿಯಮಾವಳಿಗಳಿಗೆ ವಿರುದ್ಧವಾಗಿ, ಅರ್ಹತಾ ನಿಯಮಗಳನ್ನು ಉಲ್ಲಂಘಿಸಿ ಮಹತ್ವದ 2ಜಿ ತರಂಗಾಂತರವನ್ನು 4ರಿಂದ 8ರವರೆಗಿನ ಆರೋಪಿಗಳಿಗೆ ಅನುಕೂಲವಾಗುವಂತೆ ಹಂಚಿಕೆ ಮಾಡಿದರು ಎಂದು ಲಲಿತ್ ವಿವರಿಸಿದರು.

ಹೀಗೆ ರಾಜಾ ಮತ್ತು ಇತರರು ಸಾರ್ವಜನಿಕ ಸೇವಕರಾಗಿ ವಿಶ್ವಾಸಭಂಗದ ಕೃತ್ಯ ಎಸಗಿದ್ದು ಭಾರತೀಯ ದಂಡ ಸಂಹಿತೆಯ 409ನೇ ವಿಧಿಯ ಅಡಿಯಲ್ಲಿ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.