ADVERTISEMENT

ರಾಜ್‌ ಠಾಕ್ರೆ ಮನೆಗೆ ಸಚಿನ್, ಲತಾ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮುಖ್ಯಸ್ಥ ರಾಜ್ ಠಾಕ್ರೆ ಅವರ ಮುಂಬೈ ನಿವಾಸ ಭಾನುವಾರ ಅಪರೂಪದ ಹಾಗೂ ಅವಿಸ್ಮರಣೀಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು.

ಸಂಗೀತ ಮತ್ತು ಕ್ರಿಕೆಟ್ ಲೋಕದ ದಿಗ್ಗಜರಾದ ಲತಾ ಮಂಗೇಶ್ಕರ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರನ್ನು ರಾಜ್‌ ಠಾಕ್ರೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು.

ಈ ಅಪ­ರೂಪದ ಕ್ಷಣಗಳನ್ನು ಸ್ಮರಣೀಯ­ವಾಗಿ­ಸಲು ಲತಾ ಮಂಗೇಶ್ಕರ್‌ ತಮ್ಮ ಹಾಡಿನ ಎರಡು ಧ್ವನಿಮುದ್ರಿಕೆಗಳನ್ನು ಸಚಿನ್‌ ಅವರಿಗೆ ಕೊಡುಗೆಯಾಗಿ ನೀಡಿದರು.

ಈ ಧ್ವನಿಮುದ್ರಿಕೆಯಲ್ಲಿ ಲತಾ ಅವರ ಜನಪ್ರಿಯ ‘ತು ಜಹಾ, ಜಹಾ ಚಲೇಗಾ’ ಮತ್ತು ‘ಪಿಯಾ ತೂಸೆ ನೈನಾ ಲಗೇ ರೆ’ ಹಾಡುಗಳಿವೆ.
‘ನಾನೀಗ ಹೊಸ ಮನೆಗೆ ಪ್ರವೇಶಿ­ಸುತ್ತಿದ್ದೇನೆ. ಲತಾ ಮಂಗೇಶ್ಕರ್‌ ಅವರು ಬಳಿಸಿದ ಕರವಸ್ತ್ರದಂತಹ   ವಸ್ತುವನ್ನು ನನ್ನ ಕೊಠಡಿಯಲ್ಲಿ ಇಡಲು ಬಯಸಿದ್ದೆ’ ಎಂದು ಸಚಿನ್‌ ಈ ಸಂದರ್ಭದಲ್ಲಿ ಹೇಳಿದರು.

‘ನಾನು ಕ್ರಿಕೆಟ್‌ ಆಡಲು ವಿದೇಶ ಪ್ರವಾಸ ಕೈಗೊಂಡಾಗಲೆಲ್ಲ  ಸದಾ ಅವರ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದೆ. ಅವರ ಹಾಡುಗಳೆಂದರೆ ನನಗೆ ಪಂಚ­ಪ್ರಾಣ. ಹೀಗಾಗಿ  ಪ್ರವಾಸದ ಸಂದರ್ಭ­ಗಳಲ್ಲಿ ಸದಾ ಅವರು ನನ್ನೊಂದಿಗೆ ಇರುತ್ತಿದ್ದರು’ ಎಂದು ಸ್ಮರಿಸಿಕೊಂಡರು.
ಲತಾ ಮಂಗೇಶ್ಕರ್‌ ಕೂಡ, ಸಚಿನ್‌ ತಮ್ಮ ಅಚ್ಚುಮೆಚ್ಚಿನ ಕ್ರಿಕೆಟ್ ಆಟಗಾರ ಎಂದು ಬಣ್ಣಿಸಿದರು.

‘ಸಚಿನ್ ಅನೇಕ ಬಾರಿ ಕೆಟ್ಟ ತೀರ್ಪುಗಳಿಗೆ ಬಲಿಯಾದ ಆಟಗಾರ. ಆದರೂ, ಅವರು ಎಂದಿಗೂ ತಮ್ಮ ಅಸಮಾಧಾನ ಹೊರಹಾಕಲಿಲ್ಲ’ ಎಂದರು.

‘ಎರಡು ಭಾರತ ರತ್ನಗಳು ಒಟ್ಟೊಟ್ಟಿಗೆ ಮನೆಗೆ ಆಗಮಿಸಿರುವುದು ನನ್ನ ಸೌಭಾಗ್ಯ’ ಎಂದು ರಾಜ್ ಠಾಕ್ರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.