ADVERTISEMENT

ರಾಹುಲ್ ವಿರುದ್ಧದ ಆರೋಪಗಳ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 9:40 IST
Last Updated 17 ನವೆಂಬರ್ 2012, 9:40 IST
ರಾಹುಲ್ ವಿರುದ್ಧದ ಆರೋಪಗಳ ತನಿಖೆಗೆ ಆದೇಶ
ರಾಹುಲ್ ವಿರುದ್ಧದ ಆರೋಪಗಳ ತನಿಖೆಗೆ ಆದೇಶ   

ನವದೆಹಲಿ (ಪಿಟಿಐ): 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಅವರು `ತಪ್ಪು ಮಾಹಿತಿ~ ನೀಡಿದ್ದಾರೆ ಎಂದು ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗವು ಅಮೇಥಿ ಲೋಕಸಭೆ ಚುನಾವಣಾ ಕ್ಷೇತ್ರದ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.

ನವೆಂಬರ್ 15ರಂದು ಅಮೇಥಿ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಮುಖ್ಯ ಚುನಾವಣಾಧಿಕಾರಿಯು, ರಾಹುಲ್ ಗಾಂಧಿ ಅವರು ಜೂನ್ 2004ರಲ್ಲಿ ಹಾಗೂ 2009ರಲ್ಲಿ ನಡೆದ ಚುನಾವಣೆಗಳ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳು ತಪ್ಪು ಮಾಹಿತಿಯಿಂದ ಕೂಡಿದೆ ಎಂಬ ಸುಬ್ರಮಣಿಯನ್ ಸ್ವಾಮಿ ಅವರ ಆರೋಪಗಳನ್ನು ಕುರಿತು ವಿಚಾರಣೆ ನಡೆಸಲು ತಾವು ಯುಕ್ತ ಪ್ರಾಧಿಕಾರಿಗಳಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಹೇಳಿದ್ದಾರೆ.

ಚುನಾವಣೆ ಸಮಯದಲ್ಲಿ ಚುನಾವಣಾಧಿಕಾರಿಗಳಿಗೆ ತಪ್ಪು ಆಸ್ತಿ ವಿವರ ಕುರಿತಾದ ಪ್ರಮಾಣಪತ್ರ ಸಲ್ಲಿಸುವ ಪ್ರಕರಣಗಳ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅಪರಾಧ ಪ್ರಕ್ರಿಯಾ ಸಂಹಿತೆಯ ವಿಭಾಗ 195ರ ಅಡಿಯಲ್ಲಿ ತಾವು ಯೋಗ್ಯ ಪ್ರಾಧಿಕಾರಿಗಳಾಗಿದ್ದಿರಿ ಎಂದು ಆಯೋಗ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

ಪತ್ರ ಬರೆದಿರುವ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಆರ್.ಕೆ.ಶ್ರೀವಾಸ್ತವ್ ಅವರು ಒಂದು ವೇಳೆ ಪ್ರಮಾಣ ಪತ್ರವು ತಪ್ಪು ಮಾಹಿತಿ ಒಳಗೊಂಡಿದ್ದರೆ ಚುನಾವಣಾಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಇದೇ ವೇಳೆ ಆಯೋಗವು ಸ್ವಾಮಿ ಅವರ ದೂರಿನ ಪ್ರತಿಯನ್ನು ಅಮೇಥಿ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶಿಸಿದೆ.

ಇತ್ತೀಚಿಗಷ್ಟೇ ಸ್ವಾಮಿ ಅವರು `ನ್ಯಾಷನಲ್ ಹೆರಾಲ್ಡ್~ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ `ಅಸೋಸಿಯೇಟೆಡ್ ಜರ್ನಲ್ಸ್~ ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಿರುವ ರಾಹುಲ್ ಗಾಂಧಿ ಅವರು ಈ ಕುರಿತು 2009ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಲಾದ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.