ADVERTISEMENT

ಲೈಂಗಿಕ ಕಿರುಕುಳ ಪ್ರಕರಣ: ದುಷ್ಕರ್ಮಿಗಳ ಬಂಧನಕ್ಕೆ 48 ಗಂಟೆ ಗಡುವು

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST
ಲೈಂಗಿಕ ಕಿರುಕುಳ ಪ್ರಕರಣ: ದುಷ್ಕರ್ಮಿಗಳ ಬಂಧನಕ್ಕೆ 48 ಗಂಟೆ ಗಡುವು
ಲೈಂಗಿಕ ಕಿರುಕುಳ ಪ್ರಕರಣ: ದುಷ್ಕರ್ಮಿಗಳ ಬಂಧನಕ್ಕೆ 48 ಗಂಟೆ ಗಡುವು   

ಗುವಾಹಟಿ (ಪಿಟಿಐ): ಯುವತಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣವನ್ನು ನಿಭಾಯಿಸುವಲ್ಲಿ ಪೊಲೀಸರಿಂದ ಲೋಪವಾಗಿದೆ ಎಂದು ಒಪ್ಪಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್, ಘಟನೆಯಲ್ಲಿ ಶಾಮೀಲಾದ ಯುವಕರನ್ನು 48 ಗಂಟೆಯೊಳಗಾಗಿ ಬಂಧಿಸುವಂತೆ ಪೊಲೀಸರಿಗೆ ಗಡುವು ನೀಡಿದ್ದಾರೆ.

ಕ್ರಿಶ್ಚಿಯನ್‌ಬಸ್ತಿಯ ಬಾರ್ ಹೊರಗಡೆ ಜುಲೈ 9ರ ರಾತ್ರಿ ನಡೆದ ಘಟನೆ ಕುರಿತು ಸ್ಥಳೀಯ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋ ತುಣುಕುಗಳಿಂದ ಯುವಕರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗೊಗೊಯ್ ಅವರು ಶುಕ್ರವಾರ ರಾತ್ರಿ ಇಲ್ಲಿನ ತಮ್ಮ ನಿವಾಸದಲ್ಲಿ ನಡೆಸಿದ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪೊಲೀಸರಿಗೆ ಸೂಚಿಸಿದ್ದಾರೆ.

ಯುವಕರ ಗುಂಪೊಂದು ಬಾರ್ ಹೊರಗಡೆ ಯುವತಿಯನ್ನು ನಗ್ನಗೊಳಿಸಿ, ಲೈಂಗಿಕ ಕಿರುಕುಳ ನೀಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. 12 ಜನರನ್ನು ಗುರುತಿಸಲಾಗಿದೆ ಎಂದು  ಹೇಳಿದ್ದಾರೆ.

`ನಾನು ಘಟನೆಯನ್ನು ಖಂಡಿಸಿಲ್ಲ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ಬಿತ್ತರಿಸಿದ್ದು ವಿಷಾದದ ಸಂಗತಿ. ಘಟನೆಯ ಬಗ್ಗೆ ಸ್ಥಳೀಯ ಚಾನೆಲ್‌ನಲ್ಲಿ ವಿಡಿಯೋ ತುಣುಕುಗಳು ಪ್ರಸಾರವಾದ ಕೂಡಲೇ ಇದೊಂದು ದುರದೃಷ್ಟಕರ ಘಟನೆ ಎಂದು ಖಂಡಿಸಿದ್ದೇನೆ ಮತ್ತು ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶನ ಕೂಡ ನೀಡಿದ್ದೆ~ ಎಂದು ಹೇಳಿದ್ದಾರೆ.

ತನಿಖೆ ನಡೆಸಿ, 15 ದಿನಗಳ ಒಳಗಾಗಿ ವಿಸ್ತೃತ ವರದಿ ಸಲ್ಲಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಮಿಲಿ ಚೌಧರಿ ನೇತೃತ್ವದ ಏಕಸದಸ್ಯ ಆಯೋಗಕ್ಕೆ ಸೂಚಿಸಲಾಗಿದೆ.

ಸಚಿವರ ಭರವಸೆ: ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಯುವತಿಯನ್ನು ಸಮಾಜ ಕಲ್ಯಾಣ ಸಚಿವ ಅಕೊನ್ ಬೊರಾ ಅವರು ಶನಿವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡು, ಭದ್ರತೆ ಮತ್ತು ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

`ಘಟನೆ ನಡೆದಾಗ ಅಲ್ಲಿಯೇ ನಿಂತಿದ್ದ ಜನರು ತಮ್ಮ ನೆರವಿಗೆ ಬರಲಿಲ್ಲ. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮದವರು ಕೂಡ ತಮ್ಮ ನೆರವಿಗೆ ಬರುವುದನ್ನು ಬಿಟ್ಟು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಯಾರಿಗೂ ಇಂಥ ಅವಮಾನ ಆಗಬಾರದು. ನನಗೆ ನ್ಯಾಯ ಬೇಕು~ ಎಂದು ಯುವತಿ ಒತ್ತಾಯಿಸಿದ್ದಾರೆ. 

 ಸ್ಥಳೀಯ ಪೊಲೀಸರು ಮತ್ತು ಸ್ವಯಂ ಸೇವಾ ಸಂಸ್ಥೆ, ಘಟನೆಗೆ ಕಾರಣರಾದ ದುಷ್ಕರ್ಮಿಗಳ ಭಾವಚಿತ್ರ ಇರುವ ಭಿತ್ತಿ ಪತ್ರಗಳನ್ನು ಅಸ್ಸಾಂನ ವಿವಿಧ ಸ್ಥಳಗಳಲ್ಲಿ ಅಂಟಿಸಿದ್ದಾರೆ. ಅಸ್ಸಾಂ ಗಣ ಪರಿಷತ್ ಮಹಿಳಾ ಮೋರ್ಚಾ ಕಾರ್ಯಕರ್ತರು ಪಕ್ಷದ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿ, ಘಟನೆ ಖಂಡಿಸಿದ್ದಾರೆ.

ಹೇಯ ಕೃತ್ಯ: ಗುವಾಹಟಿಯಲ್ಲಿ ಯುವತಿ ಮೇಲೆ ನಡೆದ ಲೈಂಗಿಕ ಕಿರುಕುಳ ಹೇಯ ಕೃತ್ಯ ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಆಗ್ರಹ: ಈ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ರಚಿಸುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶನಿವಾರ ಸಲಹೆ ನೀಡಿದೆ.

ಎನ್‌ಡಬ್ಲ್ಯೂಸಿ ಭೇಟಿ: ಮೌಸಮಿಯನ್ನು ಆಕೆ ನಿವಾಸದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಶನಿವಾರ ಭೇಟಿ ನಡೆಸಿದ ವೇಳೆ ಆಕೆಯ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟಿರುವ ಗಾಯಗಳಿರುವುದು ಆಯೋಗದ ಗಮನಕ್ಕೆ ಬಂತು. ಯುವತಿ ಸುರಕ್ಷಿತವಾಗಿದ್ದು ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ವರದಿ ಇನ್ನಷ್ಟೇ ದೊರೆಯಬೇಕಿದೆ. ಎಂದು ಆಯೋಗದ ಸದಸ್ಯೆ ಅಲ್ಕಾ ಲಾಂಬಾ ತಿಳಿಸಿದರು.

ಮತ್ತೊಂದು ಪ್ರಕರಣ:
ಗುವಾಹಟಿಯಲ್ಲಿ ಯುವತಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣದ  ಬೆನ್ನಲ್ಲಿಯೇ ಅಸ್ಸಾಂನ  ಶಿವಸಾಗರ ಜಿಲ್ಲೆಯಲ್ಲಿ ಇಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಟ್ಟಿಗೆ ತರಲು ಹೋಗಿದ್ದ ಬಾಲಕಿಯ ಮೇಲೆ ಯೋಧರು ಲೈಂಗಿಕ ಕಿರುಕುಳ ನಡೆಸಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

`ಸಾಮೂಹಿಕ ಅತ್ಯಾಚಾರಕ್ಕೆ ಯತ್ನ~
ಗುವಾಹಟಿ (ಪಿಟಿಐ): `ಬಾರ್ ಹೊರಗಡೆ ಆ ದಿನದ ರಾತ್ರಿ ಯುವತಿ ಮೇಲೆ ಸುಮಾರು 40 ಜನರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಲು ಪ್ರಯತ್ನಿಸಿತ್ತು~ ಎಂದು ಘಟನೆಯ ಪ್ರತ್ಯಕ್ಷದರ್ಶಿ, ಸ್ಥಳೀಯ ಪತ್ರಿಕೆಯ ಸಂಪಾದಕ ಮುಕುಲ್ ಕಲಿಟಾ ತಿಳಿಸಿದ್ದಾರೆ.

`ಜುಲೈ 9ರಂದು ರಾತ್ರಿ 9.45ಕ್ಕೆ ನಾನು ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಸುಮಾರು 40ಕ್ಕೂ ಹೆಚ್ಚು ಜನರು ಯುವತಿಯೊಬ್ಬಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರು. ಮೈಮೇಲಿನ ಬಟ್ಟೆ ಹರಿದುಹೋಗಿ ಬಹುತೇಕ ಅರೆನಗ್ನಳಾಗಿದ್ದ ಯುವತಿ, ನನ್ನನ್ನು ರಕ್ಷಿಸಿ ಎಂದು ಅರಚುತ್ತಿದ್ದರು. ನನ್ನನ್ನು ನೋಡಿದ್ದೇ ತಡ ಅವರು  ನನ್ನ ಕಾಲಿಗೆ ಬಿದ್ದು, ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡರು. ಗುಂಪಿನಲ್ಲಿದ್ದ ಕೆಲವರು ಇಲ್ಲಿಂದ ತೆರಳುವಂತೆ ನನಗೆ ಸೂಚಿಸಿದರು. ಆ ವೇಳೆ ನಾನು ಬಹಳ ಗಾಬರಿಗೊಂಡಿದ್ದೆ~ ಎಂದು ಘಟನೆಯನ್ನು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT