ADVERTISEMENT

ವಿ.ಕೆ.ಸಿಂಗ್ ವಿರುದ್ಧ ಹೊಸ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ರಕ್ಷಣಾ ಸಚಿವಾಲಯ ಮತ್ತು ಸೇನಾ ಮುಖ್ಯಸ್ಥ ಜ. ವಿ.ಕೆ.ಸಿಂಗ್ ಅವರ ನಡುವಿನ ಭಿನ್ನಾಭಿಪ್ರಾಯದ ಕಾವು ಇದೀಗ ಸೇನಾ ನೇಮಕಾತಿಯ ಮೇಲೂ ನೇರ ಪರಿಣಾಮ ಬೀರಲು ಆರಂಭಿಸಿದಂತಿದೆ.

ತಮ್ಮ ಜನ್ಮದಿನಾಂಕ ವಿವಾದಕ್ಕೆ ಸಂಬಂಧಿಸಿದಂತೆ ಸಚಿವಾಲಯದ ವಿರುದ್ಧ ಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಸಿಂಗ್, ಸೇನಾ ಕಾರ್ಯಗಳ ಮಹಾ ನಿರ್ದೇಶಕರಾಗಿರುವ (ಡಿಜಿಎಂಒ) ಲೆ.ಜ. ಎ.ಕೆ.ಚೌಧರಿ ಅವರನ್ನು ಅಸ್ಸಾಂ ರೈಫಲ್ಸ್ ಮಹಾ ನಿರ್ದೇಶಕರನ್ನಾಗಿ ನೇಮಿಸಬೇಕೆಂದು ಕೋರಿ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಇದೀಗ ರಕ್ಷಣಾ ಸಚಿವಾಲಯ ತಡೆ ಒಡ್ಡಿದೆ.

ಸಿಂಗ್ ಅವರು ಪ್ರಸ್ತಾವ ಸಲ್ಲಿಸುವ ಮುನ್ನ ರಕ್ಷಣಾ ಕಾರ್ಯದರ್ಶಿ ಅಥವಾ ಇತರ ಯಾವುದೇ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಇರುವ ಹಿನ್ನೆಲೆಯಲ್ಲಿ ಅವರ ಕೋರಿಕೆಯನ್ನು ಪರಿಗಣಿಸದಂತೆ ರಕ್ಷಣಾ ಸಚಿವಾಲಯವು, ಅಸ್ಸಾಂ ರೈಫಲ್ಸ್ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಗೃಹ ಸಚಿವಾಲಯಕ್ಕೆ ತಿಳಿಸಿದೆ. ಇಷ್ಟೇ ಅಲ್ಲದೆ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಕಾರಿಗಳ ಹೆಸರುಗಳನ್ನು ಸೂಚಿಸುವಂತೆಯೂ ಸೇನೆಗೆ ತಿಳಿಸಿದೆ. ಸಚಿವಾಲಯದ ಈ ಆದೇಶಕ್ಕೆ ಸಿಂಗ್ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಲೆ. ಜ. ಚೌಧರಿ, ಲೆ. ಜ. ಜೆ.ಪಿ.ನೆಹ್ರಾ ಸೇರಿದಂತೆ ಮೂವರ ಹೆಸರುಗಳನ್ನು ಸೇನೆ ಈ ಹಿಂದೆ ಸೂಚಿಸಿತ್ತು. ನೇಮಕಾತಿಗೆ ಸಂಬಂಧಿಸಿದಂತೆ ಮೊದಲು ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸದೆ ಸೇನೆ ನೇರವಾಗಿ ಗೃಹ ಸಚಿವಾಲಯವನ್ನು ಸಂಪರ್ಕಿಸಿರುವುದು ಅಸಾಧಾರಣ ಕ್ರಮ. ಸಾಮಾನ್ಯವಾಗಿ ಇಂತಹ ಎಲ್ಲ ಪ್ರಸ್ತಾವಗಳಿಗೂ ಮೊದಲು ರಕ್ಷಣಾ ಸಚಿವಾಲಯ ಸಮ್ಮತಿ ನೀಡಿ ಬಳಿಕ ಇತರ ಸಚಿವಾಲಯಗಳಿಗೆ ಕಳುಹಿಸಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.

ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಲೆ.ಜ. ರಾಯ್ ಅವರನ್ನು ಸೇನೆಯ ಒತ್ತಾಯದ ಮೇರೆಗೆ ಅಸ್ಸಾಂ ರೈಫಲ್ಸ್ ಮಹಾ ನಿರ್ದೇಶಕರ ಹುದ್ದೆಯಿಂದ ಗೃಹ ಸಚಿವಾಲಯವು ವಾಪಸ್ ಕರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಫೆ. 22ರಿಂದ ಈ ಹುದ್ದೆ ಖಾಲಿಯಾಗಿ ಉಳಿದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.