ADVERTISEMENT

ವಿನಾಯಕ ಸೆನ್ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 11:35 IST
Last Updated 10 ಫೆಬ್ರುವರಿ 2011, 11:35 IST

ಬಿಲಾಸ್‌ಪುರ (ಐಎಎನ್‌ಎಸ್): ಸರ್ಕಾರದ ವಿರುದ್ಧ ಹೋರಾಡಲು ನಕ್ಸಲೀಯರ ಜತೆ ಸೇರಿ ಸಂಚು ರೂಪಿಸಿ ರಾಷ್ಟ್ರದ್ರೋಹ ಎಸಗಿದ ಆರೋಪಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾನವ ಹಕ್ಕು ಕಾರ್ಯಕರ್ತ ವಿನಾಯಕ ಸೆನ್ ಅವರ ಜಾಮೀನು ಅರ್ಜಿಯನ್ನು ಛತ್ತೀಸ್‌ಗಡ ಹೈಕೋರ್ಟ್ ಗುರುವಾರ ವಜಾ ಮಾಡಿದೆ.

ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದ ಕೊಠಡಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಟಿ.ಪಿ. ಶರ್ಮಾ ಹಾಗೂ ಝಾನ್‌ವಾರ್ ಅವರು ವಿನಾಯಕ ಸೆನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಸದ್ಯ ರಾಯ್‌ಪುರದ ಕೇಂದ್ರ ಕಾರಾಗೃಹದಲ್ಲಿರುವ ವಿನಾಯಕ ಸೆನ್ ಅವರ ಜಾಮೀನು ಅರ್ಜಿಗೆ ರಾಜ್ಯ ಸರ್ಕಾರ ಕೂಡ ತನ್ನ ವಿರೋಧ  ವ್ಯಕ್ತಪಡಿಸಿದೆ.
 

ಆದರೆ ವಿನಾಯಕ್ ಸೆನ್ ಅವರ ಪತ್ನಿ ಎಲಿನಾ ಸೆನ್ ಅವರು ಹೈಕೋರ್ಟ್ ಆದೇಶವನ್ನು ತಾವು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
 

ADVERTISEMENT

ಈ ನಡುವೆ ದೇಶದ ಬುದ್ದಿಜೀವಿಗಳಿಂದ ವಿನಾಯಕ್ ಸೆನ್ ಅವರ ಬಿಡುಗಡೆಗೆ ಭಾರಿ ಒತ್ತಾಯ ಕೇಳಿಬಂದಿದೆ. ಮ್ಯಾಗೆಸ್ಸೆ ಪುರಸ್ಕೃತ ಸಾಹಿತಿ ಮಹಾಶ್ವೇತಾದೇವಿ ಹಾಗೂ ಪ್ರಸಿದ್ದ ಕವಿ ಜಾಯ್ ಗೋಸ್ವಾಮಿ ಅವರು ವಿನಾಯಕ್ ಅವರನ್ನು ತಪ್ಪಾಗಿ ಅರ್ಥೈಸಿ ರಾಷ್ಟ್ರದ್ರೋಹ ಆಪಾದನೆ ಹೊರಿಸಲಾಗಿದೆ ಎಂದು ಹೇಳಿದ್ದಾರೆ.  ಬಡವರಿಗಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಇವರಿಗೆ ಮಾನವ ಹಕ್ಕುಗಳ ಪರಿಜ್ಞಾನವಿತ್ತು ಎಂದಿರುವ ಅವರು ಸೆನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಭುತ್ವದ ವಿರುದ್ಧ ಹೋರಾಡಲು ನಕ್ಸಲೀಯರ ಜತೆ ಸೇರಿ ಸಂಚು ರೂಪಿಸಿ ರಾಷ್ಟ್ರದ್ರೋಹ ಎಸಗಿದ ಆರೋಪಕ್ಕಾಗಿ ಮಾನವ ಹಕ್ಕು ಕಾರ್ಯಕರ್ತ ವಿನಾಯಕ ಸೆನ್, ನಕ್ಸಲ್ ಸಿದ್ಧಾಂತವಾದಿ ನಾರಾಯಣ್ ಸನ್ಯಾಲ್ ಹಾಗೂ ಕೋಲ್ಕತ್ತದ ಉದ್ಯಮಿ ಪಿಯೂಷ್ ಗುಹಾ ಅವರಿಗೆ ಛತ್ತೀಸ್ ಗಡದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಡಿಸೆಂಬರ್ 24 ರಂದು ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.