ADVERTISEMENT

ವಿಮಾನ ನಿಲ್ದಾಣಕ್ಕೆ ಹಣ ಶಿರಡಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 18:45 IST
Last Updated 20 ಏಪ್ರಿಲ್ 2011, 18:45 IST

ಶಿರಡಿ (ಮಹಾರಾಷ್ಟ್ರ), (ಐಎಎನ್‌ಎಸ್): ಉದ್ದೇಶಿತ ಶಿರಡಿ ವಿಮಾನ ನಿಲ್ದಾಣ ಯೋಜನೆಗೆ ಐವತ್ತು ಕೋಟಿ ರೂಪಾಯಿ ನೀಡುವ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಎಸ್‌ಎಸ್‌ಎಸ್‌ಟಿ)ನ ನಿರ್ಧಾರಕ್ಕೆ ಜನರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರಲ್ಲದೆ ಸುಮಾರು 80 ಮಂದಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  

ವಿವಿಧ ಸಂಘಟನೆಗಳ ಅಡಿಯಲ್ಲಿ ಒಗ್ಗೂಡಿದ 80 ಮಂದಿ ಇಲ್ಲಿಂದ 75 ಕಿ. ಮೀ. ದೂರದಲ್ಲಿರುವ  ಸಂತ ಸಾಯಿಬಾಬಾ ಅವರ ದೇವಸ್ಥಾನದ ಎದುರು ಉಪವಾಸ ಮುಷ್ಕರ ಹೂಡಿದ್ದಾರೆ. ಈಗಿರುವ ಟ್ರಸ್ಟ್ ಸದಸ್ಯರು 2004ರಲ್ಲಿ ನೇಮಕಗೊಂಡಿದ್ದು ರಾಜ್ಯ ಸರ್ಕಾರ ಎರಡು ಬಾರಿ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತ್ತು.

ಇದೇ ವೇಳೆ ಟ್ರಸ್ಟ್ ಸದಸ್ಯರು ವಿಮಾನ ನಿಲ್ದಾಣ ಯೋಜನೆಗೆ ಐವತ್ತು ಕೋಟಿ ರೂ ನೀಡುವುದರ ಮೂಲಕ ತಮ್ಮ ಅಧಿಕಾರವನ್ನು ದುರುಪಯೊಗಪಡಿಸಿಕೊಳ್ಳುತ್ತಿದ್ದಾರೆ ಎಂದು ಉಪವಾಸ ನಿರತರು ತಿಳಿಸಿದ್ದು ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಎಸ್‌ಎಸ್‌ಎಸ್‌ಟಿಗೆ ಹೊಸ ಟ್ರಸ್ಟ್ ಸದಸ್ಯರನ್ನು ನೇಮಿಸಬೇಕೆಂದು  ಒತ್ತಾಯಿಸಿದ್ದಾರೆ.

ಆದರೆ ವಿಮಾನ ನಿಲ್ದಾಣ ಯೋಜನೆಗೆ ಹಣ ನೀಡುವ ಕುರಿತು ಇದುವರೆಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಎಸ್ಎಸ್‌ಎಟಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.