ADVERTISEMENT

ವಿಮಾನ ಪ್ರಯಾಣ ಅವಾಂತರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ತಿರುವನಂತಪುರ: ಕಾಕ್‌ಪಿಟ್‌ಗೆ ನುಗ್ಗಿ ವಾಗ್ವಾದಕ್ಕೆ ಇಳಿದ ಪ್ರಯಾಣಿಕರ ವರ್ತನೆಯಿಂದ ಗಲಿಬಿಲಿಗೊಂಡ ಮಹಿಳಾ ಪೈಲಟ್, ವಿವೇಚನೆಯಿಲ್ಲದೆ ಆತುರದಿಂದ `ವಿಮಾನ ಅಪಹರಣದ ಸಂಕೇತ ಗುಂಡಿ~ (ಹೈಜಾಕ್ ಬಟನ್) ಒತ್ತಿ ಇಡೀ ದೇಶವನ್ನೇ ಕೆಲ ಕಾಲ ತಲ್ಲಣಗೊಳಿಸಿದ ಪ್ರಸಂಗ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಸಾಕಷ್ಟು ರಾದ್ದಾಂತದ ಬಳಿಕ ಬೇರೆ ಚಾಲಕ ಸಿಬ್ಬಂದಿಯೊಂದಿಗೆ ವಿಮಾನ ಮಧ್ಯಾಹ್ನ 2.50ಕ್ಕೆ ಕೊಚ್ಚಿಗೆ ಮರಳಿತು. ಗಲಾಟೆಗೆ ಕಾರಣರಾದ ಆರೋಪದ ಮೇಲೆ ಆರು ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿ ನಂತರ ಬಿಡುಗಡೆ ಮಾಡಿದರು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶಿಸಿದೆ.

ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಕೈಮಾಡಿದರು ಎಂದು ಕೆಲ ಪ್ರಯಾಣಿಕರು ದೂರಿದ್ದಾರೆ. ಈ ದೂರು ಮತ್ತು ಪೈಲಟ್ ಮಾಡಿದ ಪ್ರತ್ಯಾರೋಪದ ಬಗ್ಗೆ ವಿಚಾರಣೆ ನಡೆಸಲು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ರಾಜ್ಯದ ಡಿಜಿಪಿಗೆ ಸೂಚಿಸಿದ್ದಾರೆ.

ನಡೆದದ್ದೇನು?: ಶುಕ್ರವಾರ ಬೆಳಗಿನ ಜಾವ 3.30ಕ್ಕೆ ತಲುಪಬೇಕಿದ್ದ ಅಬುದಾಬಿ- ಕೊಚ್ಚಿ ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಕೊಚ್ಚಿಯಲ್ಲಿ ಇಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪೈಲಟ್ ತಿರುವನಂತಪುರ ನಿಲ್ದಾಣದಲ್ಲಿ ಇಳಿಸಿದರು. ಇದರಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ಸಾಕಷ್ಟು ಸಮಯ ಕಳೆದರೂ ವಿಮಾನ ಹೊರಡುವ ಲಕ್ಷಣ ಕಂಡು ಬರಲಿಲ್ಲ. ಅಬುಧಾಬಿಯಿಂದಲೇ ಮೂರುವರೆ ತಾಸು ತಡವಾಗಿ ಹೊರಟಿದ್ದ ಈ ವಿಮಾನದ ಒಳಗೇ ಕುಳಿತಿದ್ದ ಪ್ರಯಾಣಿಕರಿಗೆ ಆಹಾರ, ನೀರಿನ ವ್ಯವಸ್ಥೆಯೂ ಇರಲಿಲ್ಲ. ಶೌಚಾಲಯ ವ್ಯವಸ್ಥೆ ಹದಗೆಟ್ಟಿತ್ತು. ಇದರ ನಡುವೆ, `ತಮ್ಮ ಕರ್ತವ್ಯದ ಅವಧಿ ಮುಗಿದಿದ್ದು ಈ  ವಿಮಾನ ಕೊಚ್ಚಿಗೆ ಹೋಗುವುದಿಲ್ಲ~ ಎಂದು ಚಾಲಕ ಸಿಬ್ಬಂದಿ ಪ್ರಕಟಿಸುತ್ತಿದ್ದಂತೇ ಪ್ರಯಾಣಿಕರ ಸಹನೆಯ ಕಟ್ಟೆ ಒಡೆಯಿತು. ಬದಲಿ ವ್ಯವಸ್ಥೆ ಮಾಡುವ ವರೆಗೆ ಸಿಬ್ಬಂದಿಯನ್ನು ಹೊರ ಹೋಗಲು ಬಿಡುವುದಿಲ್ಲ ಎಂದು ಹೇಳಿ ಕಾಕ್‌ಪಿಟ್‌ಗೆ ನುಗ್ಗಿ ಪೈಲಟ್ ಜತೆ ವಾಗ್ವಾದಕ್ಕೆ ಇಳಿದರು.     

ಇದರಿಂದ ಗಲಿಬಿಲಿಗೊಂಡ ಪೈಲಟ್ ರೂಪಾಲಿ ವಾಗ್ಮೋರೆ ಅವರು ವಿಮಾನ ಅಪಹರಣ ಸಂಕೇತದ ಗುಂಡಿ ಒತ್ತಿದರು. ಎಚ್ಚರಿಕೆ ಸಂದೇಶ  ಎಲ್ಲೆಡೆ ಬಿತ್ತರಗೊಳ್ಳುತ್ತಿದ್ದಂತೆ ಜಾಗೃತಗೊಂಡ ಭದ್ರತಾ ಸಿಬ್ಬಂದಿ ವಿಮಾನ ಸುತ್ತವರಿದರು. ಆದರೆ ವಾಸ್ತವವಾಗಿ ಇದು ಅಪಹರಣವಲ್ಲ; ಪ್ರಯಾಣಿಕರು- ಪೈಲಟ್ ನಡುವಿನ ವಾಗ್ವಾದದಿಂದ ಈ ಘಟನೆ ನಡೆದಿದೆ ಎನ್ನುವುದು ನಂತರ ತಿಳಿಯಿತು.

ಪ್ರಯಾಣಿಕರನ್ನು ಸಂತೈಸಿ ಬೇರೆ ಪೈಲಟ್ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಅದೇ ವಿಮಾನದಲ್ಲಿ ಸುಮಾರು 9 ತಾಸಿನ ಬಳಿಕ ಕೊಚ್ಚಿಗೆ ಕಳಿಸಿಕೊಡಲಾಯಿತು.

`ತಾಂತ್ರಿಕ ತೊಂದರೆಯಿಂದಾಗಿ ವಿಮಾನ ಕೊಚ್ಚಿಗೆ ಪ್ರಯಾಣ ಬೆಳೆಸುವುದಿಲ್ಲ ಎಂದು ಹೇಳಿದ್ದರಿಂದ ಕೋಪಗೊಂಡ ಪ್ರಯಾಣಿಕರು ಸಿಬ್ಬಂದಿ ಜತೆ ಮಾತಿನ ಚಕಮಕಿಗೆ ಇಳಿದರು. ಇದು ಅಪಹರಣ ಯತ್ನ ಅಲ್ಲವೇ ಅಲ್ಲ~ ಎಂದು ಕೇರಳದ ವಿಮಾನ ನಿಲ್ದಾಣಗಳ ಉಸ್ತುವಾರಿ ಸಚಿವ ಕೆ. ಬಾಬು ನಂತರ ಸುದ್ದಿಗಾರರಿಗೆ ತಿಳಿಸಿದರು.

ಪ್ರಯಾಣಿಕರಿಗೆ ನರಕ ಯಾತನೆ: `ವಿಮಾನ ಹೊರಡುವುದಿಲ್ಲ ಎಂದಾಗ ಕೆಲವರು ಲಗೇಜ್ ತೆಗೆದುಕೊಂಡು ಕಾಕ್‌ಪಿಟ್‌ನತ್ತ ಧಾವಿಸಿದರು. ಆದರೆ ಹೈಜಾಕ್ ಗುಂಡಿ ಒತ್ತಿದ್ದು ಏಕೆ ಎಂಬುದು ಪೈಲಟ್‌ಗೆ ಮಾತ್ರ ಗೊತ್ತು~ ಎಂದು ವಿಮಾನದ ಪ್ರಯಾಣಿಕರಲ್ಲೊಬ್ಬರಾದ ಶಿವನ್ ಹೇಳಿದರು.

`ಸಂಚಾರ ವಿಳಂಬದ ಜತೆಗೆ ವಿಮಾನದೊಳಗಿನ ಹವಾನಿಯಂತ್ರಕಗಳನ್ನು ಬಂದ್ ಮಾಡಲಾಗಿತ್ತು. ಮಕ್ಕಳಿಗೆ ಆಹಾರ ನೀಡಿರಲಿಲ್ಲ. ಕುಡಿಯಲು ನೀರು ಕೊಡಲಿಲ್ಲ. ಶೌಚಾಲಯ ದುರ್ನಾತ ಬೀರುತ್ತಿತ್ತು. ಒಳಗೆ ಉಸಿರುಗಟ್ಟಿದ ವಾತಾವರಣ ಇತ್ತು. ಪ್ರಯಾಣಿಕರು ಇಂಥ ಅವ್ಯವಸ್ಥೆ ಹಾಗೂ ವಿಮಾನ ಸಂಚಾರ ವಿಳಂಬದ ಬಗ್ಗೆ ಪೈಲಟ್‌ಗೆ ದೂರು ನೀಡುತ್ತಿದ್ದರು. ಅದನ್ನು ಬಿಟ್ಟು ಯಾರೂ ಕಾಕ್‌ಪಿಟ್ ಒಳಗೆ ಹೋಗಿಲ್ಲ~ ಎಂದು ಇದೇ ವಿಮಾನದಲ್ಲಿ ಬಂದ ತನ್ಯಾ ವಿವರಿಸಿದರು.

ಘಟನೆಗೆ ಕಾರಣವನ್ನು ನಿಖರವಾಗಿ ವಿವರಿಸಿದ ಪ್ರಯಾಣಿಕ ಪ್ರೇಮ್‌ಜಿತ್, `ಅಭುದಾಬಿಯಿಂದ ಹೊರಟ ವಿಮಾನ ಗುರುವಾರ ಮುಂಜಾನೆ 3.30ಕ್ಕೆ ಕೊಚ್ಚಿ ತಲುಪಬೇಕಿತ್ತು. ಮಂಜು ಮುಸುಕಿದ ವಾತಾವರಣ ಹಾಗೂ ಅಬುಧಾಬಿಯನ್ನು ತಡವಾಗಿ ಬಿಟ್ಟಿದ್ದರಿಂದ ಬೆಳಿಗ್ಗೆ 6.30ಕ್ಕೆ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ  ಇಳಿಯಿತು. ಅಲ್ಲಿ ದೀರ್ಘ ವಿಳಂಬ ಮಾಡಿದ್ದರಿಂದ ಈ ಪ್ರಸಂಗ ನಡೆಯಿತು~ ಎಂದರು.

ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕರ ವಿರುದ್ಧವಾಗಲಿ, ಪೈಲಟ್ ವಿರುದ್ಧವಾಗಲಿ ದೂರು ದಾಖಲಾಗಿಲ್ಲ. ವಿಮಾನ ಸಂಚಾರ ವಿಳಂಬವಾಗಿದ್ದರಿಂದ ಬೇಸತ್ತ ಪ್ರಯಾಣಿಕರು ಹೀಗೆ ವರ್ತಿಸಿದ್ದಾರೆ. ಇದು `ಭದ್ರತೆ~ಗೆ ಸಂಬಂಧಿಸಿದ ವಿಷಯವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತುರ್ತು ಸಂದರ್ಭಗಳು
ವೈಮಾನಿಕ ನಿಯಮಗಳ ಪ್ರಕಾರ ಪೈಲಟ್‌ಗಳು ಬೇರೆ ಬೇರೆ ತುರ್ತು ಸಂದರ್ಭಗಳಲ್ಲಿ ಮೂರು ಪ್ರತ್ಯೇಕ ಟ್ರಾನ್ಸ್‌ಪಾಂಡರ್ ಕೋಡ್‌ಗಳನ್ನು ಬಳಸುತ್ತಾರೆ. ಅಪಹರಣ ನಡೆದರೆ, ವಿಮಾನ ಮತ್ತು ನಿಲ್ದಾಣದ ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದು ಹೋದರೆ ಅಥವಾ ತುರ್ತು ಭೂ ಸ್ಪರ್ಶ ಮಾಡುವ ಪ್ರಸಂಗ ಬಂದರೆ ಮಾಹಿತಿ ನೀಡಲು ಕಾಕ್‌ಪಿಟ್‌ನಲ್ಲಿನ 3 ವಿಶೇಷ ಗುಂಡಿಗಳ ಪೈಕಿ ನಿರ್ದಿಷ್ಟ ಗುಂಡಿ ಅದುಮುತ್ತಾರೆ. ಇದು ತುರ್ತು ಸಂದೇಶಗಳನ್ನು ಎಲ್ಲೆಡೆ ರವಾನಿಸುತ್ತದೆ.

ಪೈಲಟ್ ತಪ್ಪು
ಆರು ಪುರುಷ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ವಿಮಾನ ಅಪಹರಣಕ್ಕೆ ಪ್ರಯತ್ನಿಸಿದರು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ರೂಪಾಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ ಪೈಲಟ್ ಅವರ ಮಿತಿಮೀರಿದ ವರ್ತನೆಯೇ ಇಡೀ ಅವಾಂತರಕ್ಕೆ ಕಾರಣ ಎಂದು ವಿಮಾನ ನಿಲ್ದಾಣದ ಡಿಜಿಸಿಎ ತೀರ್ಮಾನಿಸಿದೆ. ಅವರ ವಿರುದ್ಧ ವಿಚಾರಣೆಗೆ ಆದೇಶಿಸಿದೆ.

ಪ್ರಯಾಣಿಕರ ಕೋಪತಾಪ
ಇದಕ್ಕೆಲ್ಲ ಆ ಮಹಿಳಾ ಪೈಲಟ್ ಕಾರಣ. ಆಕೆ ಹೊಣೆಗೇಡಿ. ನಮ್ಮೊಂದಿಗೆ ಒರಟಾಗಿ ವರ್ತಿಸಿದರು.
- ಅನಿತಾ

* ನಾವು ಕುಡಿಯಲು ನೀರು ಕೇಳಿದರೆ ಭದ್ರತಾ ಸಿಬ್ಬಂದಿ ನಮ್ಮ ಹೊಟ್ಟೆಗೆ ಒದ್ದರು. ಇದರ ಸಹವಾಸವೇ ಸಾಕು. ಇನ್ನೆಂದೂ ಏರ್ ಇಂಡಿಯಾ ವಿಮಾನ ಹತ್ತುವುದಿಲ್ಲ.
- ಶಹನವಾಜ್

* ನಾವು ತಿರುವನಂತಪುರದಲ್ಲಿ ಇಳಿಯಲು ತಯಾರಿಲ್ಲ, ಕೊಚ್ಚಿಗೆ ವಾಪಸ್ ಕರೆದುಕೊಂಡು ಹೋಗಿ ಬಿಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ನಮಗೆ ಪಾಠ ಕಲಿಸಲು ಸಿಬ್ಬಂದಿ ವಿಮಾನದ ಒಳಗಿನ ದೀಪ ಆರಿಸಿದರು. ನೀರು, ಆಹಾರ ಕೂಡ ಕೊಡಲಿಲ್ಲ.
- ತಾನಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.