ADVERTISEMENT

ವಿಲೀನ ಪ್ರಕ್ರಿಯೆಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಹಾಗೂ ಇಂಡಿಯನ್ ಏರ್‌ಲೈನ್ಸ್ ವಿಲೀನವು ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ಈ ಪ್ರಕ್ರಿಯೆಯಲ್ಲಿ ಕೆಲವು ಗಂಭೀರ ಲೋಪಗಳು ಸಂಭವಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಹೇಳಿದರು.

ಟಿ.ವಿ. ವಾಹಿನಿಯೊಂದರ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರು ಈ ಕುರಿತು ಮಾತನಾಡಿ, `ಪ್ರಸ್ತುತದ ಸನ್ನಿವೇಶವನ್ನು ಗಮನಿಸುವುದು, ಅನುಭವದಿಂದ ಪಾಠ ಕಲಿಯುವುದು ಹಾಗೂ ಏರ್ ಇಂಡಿಯಾವನ್ನು ಲಾಭಕರ ಸಂಸ್ಥೆಯನ್ನಾಗಿ ಪರಿವರ್ತಿಸುವುದಷ್ಟೇ ನನ್ನ ಈಗಿನ ಹೊಣೆ~ ಎಂದರು.

`ವಿಮಾನ ಸಂಸ್ಥೆಯ ಬಹುತೇಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಧರ್ಮಾಧಿಕಾರಿ ವರದಿಯು ಶಿಫಾರಸುಗಳನ್ನು ಒಳಗೊಂಡಿದ್ದು, ನಾವೀಗ ಅದನ್ನು ಅನುಷ್ಠಾನಗೊಳಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವ ಜರೂರಿದೆ~ ಎಂದು ಅಭಿಪ್ರಾಯಪಟ್ಟರು.

ಈ ವಿಲೀನ ಪ್ರಕ್ರಿಯೆ ವಿಫಲವಾಗಿರುವುದಕ್ಕಾಗಿ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಸಂಸ್ಥೆಯ ಈಗಿನ ಬಿಕ್ಕಟ್ಟುಗಳ ಕುರಿತು ಚರ್ಚಿಸುವುದು ಈಗಿನ ಉದ್ದೇಶ ಎಂದೂ ಹೇಳಿದರು.

ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಯೋಚನೆ ಸದ್ಯಕ್ಕಿಲ್ಲ. ಮೊದಲು ಸಂಸ್ಥೆಯ ನಷ್ಟ ತಪ್ಪಿಸಿ, ಅದನ್ನು ಸರಿ ಹಾದಿಗೆ ತರಬೇಕಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಆದರೆ  ಪ್ರಸ್ತುತ ಜಗತ್ತಿನ ಯಾವ ರಾಷ್ಟ್ರವೂ ಸರ್ಕಾರಿ ಸಾಮ್ಯದ ವಿಮಾನಯಾನ ಸಂಸ್ಥೆಗಳ ಸೇವೆಯನ್ನು ನೆಚ್ಚಿಕೊಂಡಿಲ್ಲ. ಆ ದಿನಗಳು ಮುಗಿದಿವೆ ಎಂಬ ಅರಿವು ಸರ್ಕಾರಕ್ಕೆ ಇದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.