ADVERTISEMENT

ವಿವಾದಿತ ಟ್ವೀಟ್‌ :ಗೊಂದಲ ಬಗೆಹರಿಸಲು ಸಮ್ಮತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ವಿವಾದಿತ ಟ್ವೀಟ್‌ :ಗೊಂದಲ ಬಗೆಹರಿಸಲು ಸಮ್ಮತಿ
ವಿವಾದಿತ ಟ್ವೀಟ್‌ :ಗೊಂದಲ ಬಗೆಹರಿಸಲು ಸಮ್ಮತಿ   

ನವದೆಹಲಿ: ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ನಿಂದ ಉಂಟಾದ ಗೊಂದಲವನ್ನು ತಾನೇ ಬಗೆಹರಿಸುವುದಾಗಿ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಮುಖಂಡರಿಗೆ ತಿಳಿಸಿದೆ.

‘ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಹಣದ ಪಾತ್ರ ಇದೆ’ ಎಂದು ದೂರಿದ್ದ ಈ ಟ್ವೀಟ್‌ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ಶನಿವಾರ ಹೈಕಮಾಂಡ್‌ ಗಮನ ಸೆಳೆದಿದ್ದಾರೆ.

ಈ ಟ್ವೀಟ್‌ನಿಂದಾಗಿ ಪಕ್ಷಕ್ಕೆ ಮುಜುಗರ ಉಂಟಾಗಿದೆ. ವಿರೋಧ ಪಕ್ಷಗಳು ಈ ವಿಷಯವನ್ನೇ ಮುಂದಿರಿಸಿ ಟೀಕೆ ಮಾಡುತ್ತಿವೆ ಎಂದೂ ಅವರು ವಿವರಿಸಿದ್ದಾರೆ.

ADVERTISEMENT

‘ಕಾರ್ಕಳ ಕ್ಷೇತ್ರದ ಟಿಕೆಟ್‌ ಕುರಿತು ಪಕ್ಷದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕಿದ್ದ ಪಟ್ಟಿಯಲ್ಲಿ ನನ್ನ ಪುತ್ರ ಹರ್ಷ ಅವರ ಹೆಸರನ್ನು ಮಾತ್ರ ಬರೆಯಬೇಕು. ಇತರ ಆಕಾಂಕ್ಷಿಗಳ ಹೆಸರನ್ನು ಸೇರಿಸಕೂಡದು ಎಂದು ಮೊಯಿಲಿ ಸೂಚಿಸಿದ್ದರಿಂದ ಗೊಂದಲ ಉಂಟಾಗಿದೆ’ ಎಂದು ಈ ಇಬ್ಬರೂ ನಾಯಕರು ವರಿಷ್ಠರಿಗೆ ತಿಳಿಸಿದ್ದಾರೆ.

‘ಈ ಟ್ವೀಟ್‌ ನನ್ನದಲ್ಲ. ಬೇರೆ ಯಾರೋ ಮಾಡಿರಬಹುದು. ಟ್ವಿಟರ್ ಖಾತೆ ಹ್ಯಾಕ್‌ ಆಗಿರಬಹುದು ಎಂದು ಮೊಯಿಲಿ ಹೇಳಿಕೆ ನೀಡಿದ್ದಾರೆ. ಅವರ ಟ್ವಿಟರ್‌ ಖಾತೆ ಹ್ಯಾಕ್‌ ಆಗಿತ್ತೇ ಎಂಬ ಕುರಿತು ವಿಚಾರಣೆ ನಡೆಸಬೇಕು’ ಎಂದೂ ಹೈಕಮಾಂಡ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ಸಮೀಪಿಸಿರುವಾಗ ಟ್ವೀಟ್‌ ಮೂಲಕ ಈ ರೀತಿಯ ವಿವಾದಿತ ಹೇಳಿಕೆ ನೀಡಿರುವುದು ಸೂಕ್ತವಲ್ಲ. ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಿ ಗೊಂದಲ ನಿವಾರಿಸಬೇಕು ಎಂದು ವರಿಷ್ಠರಿಗೆ ಕೋರಲಾಗಿದೆ ಎಂದು ಜಿ. ಪರಮೇಶ್ವರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.