ADVERTISEMENT

ವೀರಶೈವಕ್ಕೆ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ನವದೆಹಲಿ: ವೀರಶೈವ ಸಮುದಾಯಕ್ಕೂ ಬೌದ್ಧ, ಜೈನ, ಸಿಖ್‌ ಸಮು­ದಾಯಗಳಂತೆ ಧಾರ್ಮಿಕ ಅಲ್ಪ­ಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ.

ರಾಜ್ಯದ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಗೃಹ ಸಚಿವ ಸುಶೀಲ್‌ ಕುಮಾರ್ ಶಿಂಧೆ ಅವರನ್ನು ಗುರು­ವಾರ ಭೇಟಿ ಮಾಡಿದ್ದ ವೀರಶೈವ ಸಮಾಜದ ಮುಖಂಡರು ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.

ವೀರಶೈವರು ಹಿಂದುಗಳಲ್ಲ. ಬಸವಣ್ಣ ವೀರಶೈವ ಧರ್ಮ ಸ್ಥಾಪಿಸಿದ್ದಾರೆ. ದಕ್ಷಿಣ ಭಾರತದಲ್ಲಿ 4 ಕೋಟಿ ಜನ ವೀರಶೈವರಿದ್ದು, ಧಾರ್ಮಿಕ ಅಲ್ಪ­ಸಂಖ್ಯಾತ ಸ್ಥಾನ­ಮಾನ ನೀಡುವಂತೆ ಆಗ್ರಹಿಸಿದರು. ಅನಂತರ ಶಾಮ­ನೂರು ಶಿವ­ಶಂಕರಪ್ಪ ಮತ್ತಿತರರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವ­ರನ್ನು ಭೇಟಿ ಮಾಡಿ­ದ್ದರು. ತಮ್ಮ ಬೇಡಿಕೆಯನ್ನು ಮಾನ್ಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡು­ವಂತೆ ಕೋರಿದರು. ಕಾಂಗ್ರೆಸ್‌ ಅಧ್ಯಕ್ಷರ ಮುಂದೆ ರಾಜ­ಕೀಯ ವಿಚಾರ ಕುರಿತು ಪ್ರಸ್ತಾಪ ಮಾಡಲಿಲ್ಲ. ಅನಂತರ ದಿಗ್ವಿಜಯ್‌ ಸಿಂಗ್‌ ಅವರನ್ನು ಸಚಿ­ವರು ಕಂಡು ಮಾತುಕತೆ ನಡೆಸಿದರು. ಇದು ಸೌಜ­ನ್ಯದ ಭೇಟಿ. ಸಚಿವರಾದ ಬಳಿಕ ಅವರು ದೆಹಲಿಗೆ ಬಂದಿರಲಿಲ್ಲ ಎಂದು ಶಿವಶಂಕರಪ್ಪ ಅವರ ಆಪ್ತ ಮೂಲ­ಗಳು ತಿಳಿಸಿವೆ.

ಇದಕ್ಕೂ ಮುನ್ನ ಕೃಷಿಸಚಿವ ಶರದ್‌ ಪವಾರ್‌ ಅವ­ರನ್ನು ಭೇಟಿ ಮಾಡಿ ಅತಿವೃಷ್ಟಿ/ ಅನಾವೃಷ್ಟಿಯಿಂದ ಹಾಳಾಗಿರುವ ಅಡಿಕೆ, ತೆಂಗು ಮತ್ತು ದಾಳಿಂಬೆ ಬೆಳೆಗಳಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ 1800 ಕೋಟಿ ಮೊತ್ತದ ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಸಚಿವರು ವಿವರಿಸಿದರು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ತೋಟಗಾರಿಕೆ ಬೆಳೆ ನಷ್ಟವಾದ ಬಗ್ಗೆ ತಮಗೆ ಮಾಹಿತಿ ಇದೆ. ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವುದಾಗಿ ಪವಾರ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.