ADVERTISEMENT

ವೈಎಸ್‌ಆರ್ ಆಡಳಿತಾವಧಿಯಲ್ಲಿ ಭೂಮಿ ಮಂಜೂರು:ಜಗನ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಗುಂಟೂರು (ಪಿಟಿಐ): ಉದ್ಯೋಗಾವಕಾಶ ಸೃಷ್ಟಿಸುವ ಸಲುವಾಗಿ ವೈ.ಎಸ್. ರಾಜಶೇಖರ ರೆಡ್ಡಿ (ವೈ.ಎಸ್.ಆರ್) ಅವರ ಆಡಳಿತದಲ್ಲಿ ಮಾಡಲಾಗಿರುವ ಭೂಮಿ ಮಂಜೂರಾತಿಯು ಸರಿಯಾಗಿಯೇ ಇದೆ ವೈಎಸ್‌ಆರ್ ಅವರ ಮಗ ಹಾಗೂ ಸಂಸದ ಜಗನ್ ಮೋಹನ್ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

`ಓದಾರ್ಪು ಯಾತ್ರೆ~ ನಿಮಿತ್ತ ಭಾನುವಾರ ರಾತ್ರಿ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಮೆಹಬೂಬ್ ನಗರ, ಮೆಡಕ್ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಸಲುವಾಗಿ ಖಾಸಗಿ ಕಂಪೆನಿಗಳಿಗೆ ನನ್ನ ತಂದೆ ಭೂಮಿ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ~ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

`ತೆಲುಗು ದೇಶಂ ಪಕ್ಷದ (ಟಿಡಿಪಿ) ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ದು ಮತ್ತು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹೈದರಾಬಾದ್‌ನ ಹೃದಯಭಾಗದಲ್ಲಿ ಖಾಸಗಿಯವರಿಗೆ ಭೂಮಿ ಮಾಡಿದೆ. 
 ಅದೂ ಕಡಿಮೆ ಬೆಲೆಗೆ. ಇಂತಹದ್ದು ಸಿಬಿಐನವರ ಕಣ್ಣಿಗೆ ಕಾಣಿಸುವುದಿಲ್ಲವೇ~ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಸಿಬಿಐ ತಮ್ಮ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರೂ ಆದ್ದರಿಂದ ವಿಚಲಿತರಾದಂತೆ ಕಾಣದ ಜಗನ್ ಮೋಹನ್, ಕೆಲವು ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಧಾನಸಭೆಯ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ್ದಾರೆ.

ಸಿಬಿಐ ಜಂಟಿ ನಿರ್ದೇಶಕರಿಗೆ ಭದ್ರತೆ

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ ಜಂಟಿ ನಿರ್ದೇಶಕ ವಿ.ವಿ. ಲಕ್ಷ್ಮೀನಾರಾಯಣ ಅವರಿಗೆ ಆಂಧ್ರ ಪ್ರದೇಶ ಸರ್ಕಾರ `ವೈ~ ದರ್ಜೆ ಭದ್ರತೆ ಒದಗಿಸಿದೆ.

ಈ ತನಿಖಾಧಿಕಾರಿಗೆ ಇಬ್ಬರು ಅಂಗರಕ್ಷಕರು ದಿನಪೂರ್ತಿ ರಕ್ಷಣೆ ನೀಡಲಿದ್ದು, ಗುಂಡು ನಿರೋಧಕ ವಾಹನವನ್ನೂ ನೀಡಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನೂ ನಡೆಸುತ್ತಿರುವ ಲಕ್ಷ್ಮೀನಾರಾಯಣ ಅವರ ಭದ್ರತೆಗೆ ನಾಲ್ವರು ಸಿಬ್ಬಂದಿಯನ್ನು ಸಿಬಿಐ ಮಂಜೂರು ಮಾಡಿದೆ. ಜೊತೆಗೆ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ಕೂಡ ನೀಡಲಾಗಿದೆ.

ಲಕ್ಷ್ಮೀನಾರಾಯಣ ಅವರಿಗೆ ಯಾವುದೇ ಬೆದರಿಕೆ ಬಂದಿಲ್ಲ. ಆದರೂ ಗಣ್ಯರ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆ ನಡೆಸುತ್ತಿರುವ ಕಾರಣ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಭದ್ರತೆ ನೀಡುವ ನಿರ್ಧಾರವನ್ನು ವಿವಿಧ ಬೇಹುಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಭದ್ರತೆ ಪರಿಶೀಲನಾ ಸಮಿತಿ (ಎಸ್‌ಆರ್‌ಸಿ) ಕೈಗೊಂಡಿದೆ.

ಈ ಜಂಟಿ ನಿರ್ದೇಶಕರ ನೇತೃತ್ವದ ತಂಡವೇ ಎಮ್ಮಾರ್ ಪ್ರಕರಣವನ್ನೂ ತನಿಖೆ ನಡೆಸುತ್ತಿದ್ದು, ಇದೇ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪಪಟ್ಟಿ ದಾಖಲಾಗಿದೆ.

ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆಪಾದನೆ ಇರುವ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನೂ ಲಕ್ಷ್ಮೀನಾರಾಯಣ ಅವರಿಗೆ ಕಳೆದ ತಿಂಗಳು ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.