ADVERTISEMENT

ವೈದ್ಯಕೀಯ ಮಂಡಳಿಯ ಅನುಮತಿ ಪಡೆದು ನಿಷ್ಕ್ರಿಯ ಇಚ್ಛಾಮರಣಕ್ಕೆ ಅನುವು ಮಾಡಿ ಕೊಡಬಹುದು: ಸುಪ್ರೀಂ ಕೋರ್ಟ್

ಏಜೆನ್ಸೀಸ್
Published 9 ಮಾರ್ಚ್ 2018, 9:42 IST
Last Updated 9 ಮಾರ್ಚ್ 2018, 9:42 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಮನುಷ್ಯರಿಗೆ ಘನತೆಯಿಂದ ಸಾಯುವ ಹಕ್ಕು ಇದೆ ಎಂದು ಹೇಳಿದ ಸುಪ್ರೀಂಕೋರ್ಟ್ ಶುಕ್ರವಾರ ನಿಷ್ಕ್ರಿಯ ಇಚ್ಛಾಮರಣ ಅಥವಾ ದಯಾಮರಣಕ್ಕೆ ಅನುಮತಿ ನೀಡಿದೆ. ವೈದ್ಯಕೀಯ ಮಂಡಳಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರವೇ ವ್ಯಕ್ತಿಗೆ ದಯಾಮರಣ ನೀಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆಯಸ್ಸು ಮುಂದೂಡಲು ಬೇಕಾದ ಮದ್ದು ಮತ್ತು ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ದಯಾಮರಣ ಕಲ್ಪಿಸಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತಮ್ಮ ತೀರ್ಪಿನಲ್ಲಿ ಹೇಳಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಅದೇ ವೇಳೆ ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸಬಹುದು ಎಂದು ಸುಪ್ರೀಂಕೋರ್ಟ್  ಹೇಳಿದೆ.

2017ರಲ್ಲಿ  ದಯಾಮರಣ ಮಸೂದೆ ತಿದ್ದುಪಡಿ
ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ಪರೋಕ್ಷವಾಗಿ ಮರಣಕ್ಕೆಅನುವುಮಾಡಿಕೊಡುವ ನಿಷ್ಕ್ರಿಯ ಇಚ್ಛಾಮರಣ ಅಥವಾ ದಯಾಮರಣಕ್ಕೆ ಸಂಬಂಧಿಸಿದ ಮಸೂದೆಯನ್ನು ಕಳೆದ ವರ್ಷ ಸರ್ಕಾರ ತಿದ್ದುಪಡಿ ಮಾಡಿತ್ತು. ದಯಾಮರಣಕ್ಕೆ ಅನುಮತಿ ನೀಡಲು ಆಸ್ಪತ್ರೆಗಳಲ್ಲಿ ಸಮಿತಿ ಬೇಕು. ಈ ಸಮಿತಿಗೆ ತಪ್ಪಾದ ಮಾಹಿತಿ ಒದಗಿಸಿದರೆ ಅಂಥವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿತ್ತು,

ADVERTISEMENT

'Management of patients with terminal illness, withdrawal of medical life support bill’ ಎಂಬ ಮಸೂದೆಯಲ್ಲಿರುವ ಮುಖ್ಯ ಅಂಶಗಳು

* ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ನಿಷ್ಕ್ರಿಯ ದಯಾಮರಣ ಮಾತ್ರ ನೀಡಬಹುದು. ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ.

* ಈ ರೀತಿಯ ನಿಷ್ಕ್ರಿಯ ದಯಾಮರಣವನ್ನು ಸಹಜ ಮರಣ ಎಂದು ಪರಿಗಣಿಸಲಾಗುವುದು, ದಯಾಮರಣಕ್ಕೊಳಗಾದ ರೋಗಿ, ವೈದ್ಯರು, ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ.

*ರೋಗಿಗೆ ಸ್ವ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಚಿಕಿತ್ಸೆ ಬೇಡ ಎಂದು ಹೇಳಲು ರೋಗಿಯ ಆಪ್ತ ಸಂಬಂಧಿಕರ ಒಕ್ಕೊರಲ ಮನವಿ ಅಗತ್ಯ.

*ಎಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದಯಾಮರಣ ಮನವಿಗಳನ್ನು ಸ್ವೀಕರಿಸಿ ಅದಕ್ಕೆ ಅನುಮತಿ ನೀಡುವ ಸಮತಿಯನ್ನು ರಚಿಸಬೇಕು. ಬದುಕುಳಿಯುವ ಸಾಧ್ಯತೆ ಇಲ್ಲ ಮತ್ತು ಆತನ ಆಯಸ್ಸು ಮುಂದೂಡಲು ಇಷ್ಟವಿಲ್ಲ ಎಂದು ಹೇಳುವ ಲಿವಿಂಗ್ ವಿಲ್ ಪರಿಶೀಲಿಸಿದ ನಂತರ ಸಮಿತಿಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.

*ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5–10 ವರ್ಷ ಜೈಲು ಶಿಕ್ಷೆ ಮತ್ತು ₹20 ಲಕ್ಷದಿಂದ ₹1 ಕೋಟಿ ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

*ಚಿಕಿತ್ಸೆ ಮತ್ತು ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ರೋಗಿಗೆ ಸಾಂತ್ವನ ನೀಡಲು ಬಂಧುಗಳು ಅಥವಾ ಆಸ್ಪತ್ರೆಯ ಸಿಬ್ಬಂದಿಗಳು ಸಹಕಾರ ನೀಡಬೇಕು.

ಹಿನ್ನೆಲೆ

2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ 'ಕಾಮನ್ ಕಾಸ್' ಸರ್ಕಾರೇತರ ಸಂಘಟನೆಯು, ಭೀಕರ ಕಾಯಿಲೆಗೆ ತುತ್ತಾಗಿ ಚೇತರಿಕೆ ಅಸಾಧ್ಯ ಎಂಬ ಸ್ಥಿತಿಗೆ ತಲುಪಿದ ರೋಗಿಗೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕನ್ನು ನೀಡಬೇಕು. ಇಲ್ಲದೇ ಇದ್ದಲ್ಲಿ ಆತನ ವೇದನೆಯನ್ನು ಸುದೀರ್ಘಗೊಳಿಸುತ್ತದೆ ಎಂದು ವಾದಿಸಿತ್ತು.

ಕೃತಕ ಜೀವರಕ್ಷಕ ವೈದ್ಯಕೀಯ ನೆರವು ಮುಂದುವರೆಸಬಾರದು ಎಂಬ ಕೋರಿಕೆಯನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರವು ಇದನ್ನು 'ಆತ್ಮಹತ್ಯೆ'ಗೆ ಸಮ ಎಂದು ವಾದಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕಾನೂನು ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿತ್ತು.

ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ್ ಅವರು, ಕೃತಕ ಜೀವರಕ್ಷಕ ವೈದ್ಯಕೀಯ ಸವಲತ್ತುಗಳ ಮೂಲಕ ಸಾವಿನ ಸನಿಹದಲ್ಲಿರುವ ವ್ಯಕ್ತಿಯ ಜೀವ ರಕ್ಷಿಸುವ ಯತ್ನ ವ್ಯಕ್ತಿಯ ಸಹಜ ಆಯುಸ್ಸನ್ನು ಅಸಹಜ ರೀತಿಯಲ್ಲಿ ವೃದ್ಧಿಸುವ ಕ್ರಮವಾಗುತ್ತದೆ ಎಂದು ವಾದ ಮಂಡಿಸಿದ್ದರು.

ದಶಕಗಳ ಕಾಲ ಮರಣಶಯ್ಯೆಯಲ್ಲಿದ್ದ ಕರ್ನಾಟಕ ಮೂಲದ ಶುಶ್ರೂಷಕಿ ಮತ್ತು ಮುಂಬೈ ನಿವಾಸಿ ಅರುಣಾ ಶಾನುಭಾಗ್‌ ಅವರು ದಯಾಮರಣ ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, 2011ರಲ್ಲಿ ಸುಪ್ರೀಂ ಕೋರ್ಟ್ ಅರುಣಾ ಅವರ ದಯಾಮರಣ ಬೇಡಿಕೆಯನ್ನು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.