ADVERTISEMENT

ಶನಿ ಪೂಜೆಗೆ ಹೊರಟ ಮಹಿಳೆಯರಿಗೆ ತಡೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 19:30 IST
Last Updated 26 ಜನವರಿ 2016, 19:30 IST
ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ತೃಪ್ತಿ ದೇಸಾಯಿ
ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ತೃಪ್ತಿ ದೇಸಾಯಿ   

ಅಹಮದ್‌ನಗರ (ಪಿಟಿಐ): ಶನಿದೇವರ ಶಿಲೆಯನ್ನು ಮುಟ್ಟಿ ಪೂಜಿಸಲು ನಾಲ್ಕು ಶತಮಾನದಿಂದ ಇದ್ದ ನಿಷೇಧ ಮುರಿಯುವುದಕ್ಕೆ 400ಕ್ಕೂ ಹೆಚ್ಚು ಮಹಿಳೆಯರು ನಡೆಸಿದ ಪ್ರಯತ್ನ ವಿಫಲವಾಗಿದೆ.

ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿರುವ ಶನಿ ಶಿಂಗ್ಣಾಪುರದ ಬಯಲು ದೇವಾಲಯದ ಶಿಲೆಯನ್ನು ಮುಟ್ಟಿ ಪೂಜಿಸಲು ಮಹಿಳೆಯರಿಗೆ ನಿರ್ಬಂಧ ಇದೆ. 

ಇದನ್ನು ಉಲ್ಲಂಘಿಸಿ ಶಿಲೆಯನ್ನು ಮುಟ್ಟಿ ಪೂಜೆ ಮಾಡುವ ಸಂಕಲ್ಪದೊಂದಿಗೆ ಶಿಂಗ್ಣಾಪುರಕ್ಕೆ ಹೊರಟಿದ್ದ ಭೂಮಾತಾ ಬ್ರಿಗೇಡ್‌ ಎಂಬ ಸಂಘಟನೆ ಸದಸ್ಯೆಯರನ್ನು ಶಿಂಗ್ಣಾಪುರದಿಂದ 70 ಕಿ.ಮೀ. ದೂರದ ಸುಪಾ ಪಟ್ಟಣದಲ್ಲಿ ಪೊಲೀಸರು ತಡೆದು  ವಶಕ್ಕೆ ಪಡೆದರು. ನಂತರ ಅವರನ್ನು ಬಿಡುಗಡೆ ಮಾಡಿ ಪುಣೆಗೆ ವಾಪಸ್ ಕಳುಹಿಸಲಾಯಿತು.

ಪೊಲೀಸರೊಂದಿಗೆ ಜಟಾಪಟಿ: ಭೂಮಾತಾ ಬ್ರಿಗೇಡ್‌  ಬ್ಯಾನರ್‌ಗಳನ್ನು ಕಟ್ಟಿದ್ದ ಬಸ್‌ಗಳು ಸುಪಾ  ಪಟ್ಟಣವನ್ನು ತಲುಪುತ್ತಿದ್ದಂತೆಯೇ ಪೊಲೀಸರು ತಡೆದರು. ಸಂಘಟನೆಯ ಅಧ್ಯಕ್ಷೆ ತೃಪ್ತಿ ದೇಸಾಯಿ ಸೇರಿ ಇತರ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದರು.

ದೇವಾಲಯ ಇರುವ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ನೀಡದೇ ಇದ್ದರೆ ಹೆಲಿಕಾಪ್ಟರ್‌ನಲ್ಲಿ ಬಂದು ಹಗ್ಗದ ಮೂಲಕ ಕೆಳಗಿಳಿದು ಶಿಲೆಯನ್ನು ಮುಟ್ಟಿ ಪೂಜಿಸುವುದಾಗಿ ತೃಪ್ತಿ ಸೋಮವಾರ ಹೇಳಿದ್ದರು. ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಕಾರ್ಯಕರ್ತೆಯರು ಭಾರಿ ಪ್ರತಿರೋಧ ಒಡ್ಡಿದರು. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ ರಸ್ತೆಯಲ್ಲಿಯೇ ಮಲಗಿದರು. ‘ಗಣರಾಜ್ಯೋತ್ಸವ ದಿನ ಮಹಿಳೆಯರಿಗೆ ಕರಾಳ ದಿನ’ ಎಂದು ಘೋಷಣೆ ಕೂಗಿದರು.

ಆಕ್ರೋಶಗೊಂಡ ತೃಪ್ತಿ ದೇಸಾಯಿ ಅವರು, ‘ಮಹಿಳೆಯರ ವಿರುದ್ಧ  ತಾರತಮ್ಯ ಯಾಕೆ’ ಎಂದು ಪ್ರಶ್ನಿಸಿದರು. ಶಿಲೆ ಮುಟ್ಟಿ ಪೂಜಿಸುವ  ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು. ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ವಿರುದ್ಧ ಹರಿಹಾಯ್ದರು. ‘ಇದು ಮಹಿಳೆಯರ ಸಾಂವಿಧಾನಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆ. ನಮ್ಮನ್ನು ಯಾಕೆ ತಡೆಯಲಾಗಿದೆ ಎಂಬುದನ್ನು ಮುಖ್ಯಮಂತ್ರಿ ಹೇಳಬೇಕು. ನಾವು ಮುಂದಕ್ಕೆ ಹೋಗಿಯೇ ತೀರುತ್ತೇವೆ’ ಎಂದು ದೇಸಾಯಿ ಹೇಳಿದರು.

ಮುಸ್ಲಿಂ ಮಹಿಳೆಯರ ಬೆಂಬಲ: ಶನಿ ಶಿಲೆ ಮುಟ್ಟುವ ಮಹಿಳಾ ಕಾರ್ಯಕರ್ತರ ಪ್ರಯತ್ನಕ್ಕೆ ದೆಹಲಿಯ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ   ಬೆಂಬಲ ವ್ಯಕ್ತಪಡಿಸಿದೆ.

ಶನಿ ಶಿಂಗ್ಣಾಪುರದಲ್ಲಿ ಪೂಜಿಸುವ ಹಕ್ಕು ಮಹಿಳೆಯರಿಗೆ ಇದೆ. ಈ ಬಗ್ಗೆ ಆಡಳಿತ ಮಂಡಳಿ ಜತೆ ಚರ್ಚಿಸಿ ಪರಿಹಾರ ಹುಡುಕುವ ಅಗತ್ಯವಿದೆ.- ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT