ADVERTISEMENT

ಶಾಂತಿಭೂಷಣ್ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಅಲಹಾಬಾದ್ (ಪಿಟಿಐ): ಮುದ್ರಾಂಕ ಶುಲ್ಕ ವಂಚನೆ ಪ್ರಕರಣದಲ್ಲಿ ತಮ್ಮನ್ನು ತಪ್ಪಿತಸ್ಥನೆಂದಿದ್ದ ಸಹಾಯಕ ಮುದ್ರಾಂಕ ಆಯುಕ್ತರ ಆದೇಶದ ವಿರುದ್ಧ ಅಣ್ಣಾ ಬಳಗದ ಶಾಂತಿ ಭೂಷಣ್ ಸಲ್ಲಿಸಿದ್ದ ರಿಟ್ ದಾವೆಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾ ಮಾಡಿದೆ.

ಭೂಷಣ್ ಅವರು ಮುದ್ರಾಂಕ ಕಾಯಿದೆ ಅನುಸಾರ ಮುದ್ರಾಂಕ ರಿಜಿಸ್ಟ್ರಾರ್ ಅವರನ್ನು ಕಂಡು ಶಾಸನಬದ್ಧ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಮೂರ್ತಿ ಅರುಣ್ ಟಂಡನ್ ತೀರ್ಪು ನೀಡಿದ್ದಾರೆ.

ಇಲ್ಲಿನ ಐಷಾರಾಮಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿ 7818 ಚದುರ ಮೀಟರ್ ಆಸ್ತಿ ಖರೀದಿಸಿದ ವ್ಯವಹಾರದಲ್ಲಿ  ಭೂಷಣ್ 1.35 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ವಂಚಿಸಿದ್ದಾರೆ ಎಂದು ಮುದ್ರಾಂಕ ಆಯುಕ್ತರು ಎಂದು ಜ.6ರಂದು ಆದೇಶಿಸಿದ್ದರು.

ನಂತರ, 2010ರ ನ.29ರಿಂದ ಅನ್ವಯವಾಗುವಂತೆ ತಿಂಗಳಿಗೆ ಶೇ 1.5ರಷ್ಟು ಬಡ್ಡಿ ಸಮೇತ ಬಾಕಿ ಶುಲ್ಕವನ್ನು ಪಾವತಿಸಬೇಕೆಂದು ಸೂಚಿಸಲಾಗಿತ್ತು. ಅಲ್ಲದೇ, ಆಯುಕ್ತರು 27 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿತ್ತು. ಹಣ ಪಾವತಿಸಲು ಒಂದು ತಿಂಗಳು ಗಡುವಿನೊಳಗೆ ನೀಡದಿದ್ದರೆ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು.

ಭೂಷಣ್ ಅತಿ ಕಡಿಮೆ ಬೆಲೆಗೆ ಆಸ್ತಿ ಖರೀದಿಸಿದಂತೆ ತೋರಿಸಿ ಕೇವಲ 46,700 ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎಂದು ಆಪಾದಿಸಿದ್ದ ಮುದ್ರಾಂಕ ಮತ್ತು ನೋಂದಣಿ ಇಲಾಖೆ ನಂತರ ಫೆಬ್ರುವರಿಯಲ್ಲಿ 1.35 ಕೋಟಿ ರೂಪಾಯಿ ಪಾವತಿಸುವಂತೆ  ಕೇಂದ್ರದ ಮಾಜಿ ಕಾನೂನು ಸಚಿವರೂ ಆದ ಭೂಷಣ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.