ADVERTISEMENT

ಶಿಕ್ಷಣ ಇಲಾಖೆಯಿಂದ ಕ್ರಮಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 16:55 IST
Last Updated 21 ಫೆಬ್ರುವರಿ 2011, 16:55 IST


ಅಂಬೇಡ್ಕರ್ ನಗರ (ಐಎಎನ್‌ಎಸ್): ರಾಷ್ಟ್ರಗೀತೆಯಲ್ಲಿ ಕೆಲವು ಬದಲಾವಣೆ ಮಾಡಿ ‘ಹೊಸ ಗೀತೆ’ಯನ್ನು ಶಾಲೆಯಲ್ಲಿ ಜಾರಿಗೊಳಿಸಿದ ವ್ಯವಸ್ಥಾಪಕನ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಜರುಗಿಸಲು ಸಿದ್ಧತೆ ನಡೆಸಿದೆ.

ಉತ್ತರ ಪ್ರದೇಶದ ತಾಂಡಾ ಪಟ್ಟಣದ ‘ಲಾರ್ಡ್ ಬುದ್ಧ ಅಂಬೇಡ್ಕರ್ ಆರ್ಜಕ ಮಿಷನ್ ಶಾಲೆ’ ವ್ಯವಸ್ಥಾಪಕ ರಘುನಾಥ ಸಿಂಗ್ ‘ರಾಷ್ಟ್ರಗೀತೆಯ ಕೆಲವು ಶಬ್ದಗಳು, ಸಾಲುಗಳು ಪ್ರಜಾಪ್ರಭುತ್ವಕ್ಕೆ ಸೇರುವಂತಿಲ್ಲ’ ಎಂದು ಹೇಳಿ ಬದಲಾವಣೆ ಮಾಡಿಸಿದ್ದರು.

ಹೊಸ ಗೀತೆಯನ್ನೇ ಶಾಲೆಯಲ್ಲಿ ಹಾಡಬೇಕು ಎಂದು 1ರಿಂದ 5ನೇ ತರಗತಿ ವರೆಗಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆದೇಶವನ್ನೂ ನೀಡಿದ್ದರು ಎನ್ನಲಾಗಿದ್ದು ಈಗ ಶಿಕ್ಷಣ ಇಲಾಖೆ ಅವರ ವಿರುದ್ಧ ಕ್ರಮ ಜರುಗಿಸಲು ಸಿದ್ಧತೆ ನಡೆಸಿದೆ.
ರಾಷ್ಟ್ರಗೀತೆಯಲ್ಲಿ ಇರುವ ‘ಅಧಿನಾಯಕ’ ಬದಲಾಯಿಸಲಾಗಿದೆ. ‘ಭಾರತ ಭಾಗ್ಯ ವಿಧಾತ..’ ಭಾಗವನ್ನು ‘ಸ್ವರ್ಣಿಮ ಭಾರತ ನಿರ್ಮಾತ’ ಎಂದು ಪರಿಷ್ಕರಿಸಲಾಗಿದೆ.

‘ರವೀಂದ್ರನಾಥ ಟ್ಯಾಗೋರರು ಅಂದು ತಮ್ಮ ಹಾಡಿನಲ್ಲಿ ಐದನೇ  ಜಾರ್ಜ್ ದೊರೆಯನ್ನು ಸ್ವಾಗತಿಸಿ, ಖುಷಿ ಪಡಿಸುವ ಶಬ್ದಗಳನ್ನು ಸೇರಿಸಿ ರಚಿಸಿದ್ದರು. ಅದು ಅರಸೊತ್ತಿಗೆಗೆ ಹೊಂದಿಕೊಳ್ಳುತ್ತಿದೆ. ಆದರೆ ಇಂದು ಕಾಲ ಬದಲಾಗಿದೆ. ಸ್ವತಂತ್ರ ದೇಶದ ರಾಷ್ಟ್ರಗೀತೆಯಾಗಿ ಬದಲಾದಾಗ ಗೀತೆಯಲ್ಲಿರುವ ಕೆಲವು ಪದಗಳು ದೇಶಭಕ್ತರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವಂತಿವೆ. ಪ್ರಜಾಪ್ರಭುತ್ವಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ಎಂಬುದಕ್ಕಾಗಿ  ಬದಲಾಯಿಸಿದ್ದೇನೆ’ ಎಂದು ವ್ಯವಸ್ಥಾಪಕ ರಘುನಾಥ ಸಿಂಗ್ ತಮ್ಮ ಕ್ರಮದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.