
ಶ್ರೀನಗರ: ಸ್ವಾತಂತ್ಯ ದಿನಾಚರಣೆಯಂದೇ ಶ್ರೀನಗರದ ನೌಹಟ್ಟಾದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಉಗ್ರರ ಗುಂಪೊಂದು ದಾಳಿ ನಡೆಸಿದ್ದು, ಈ ಕಾಳಗದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.
ಬೆಳಗ್ಗೆ 8 ಗಂಟೆಯ ವೇಳೆ ಸಿಆರ್‍ಪಿಎಫ್ ಪಡೆ ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸಿಆರ್‍ಪಿಎಫ್ ಸಿಬಂದಿಗಳು ಪ್ರತಿದಾಳಿ ನಡೆಸಿದಾಗ ಉಗ್ರರು ಅಲ್ಲಿರುವ ಮನೆಗಳಿಗೆ ನುಗ್ಗಿದ್ದಾರೆ.
ಇಬ್ಬರಿಗಿಂತ ಹೆಚ್ಚು ಉಗ್ರರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಗುಂಡಿನ ಕಾಳಗದಲ್ಲಿ ಅವರು ಸತ್ತಿದ್ದಾರೆಯೇ? ಅಥವಾ ತಪ್ಪಿಸಿಕೊಂಡು ಹೋಗಿದ್ದಾರೆಯೇ? ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.|
ಘಟನಾ ಸ್ಥಳದಿಂದ ಮೃತದೇಹಗಳನ್ನು ಪತ್ತೆ ಹಚ್ಚಿರುವ ಬಗ್ಗೆಯೂ ಮಾಹಿತಿ ಲಭಿಸಿಲ್ಲ.
8 ಸಿಆರ್‍ಪಿಎಫ್ ಸಿಬಂದಿ ಮತ್ತು ಓರ್ವ ಪೊಲೀಸ್ ಅಧಿಕಾರಿ ಈ ಕಾಳಗದಲ್ಲಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಸ್ವಾತಂತ್ರ್ಯ ದಿನಾಚರಣೆ ವೇಳೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹ್‍ಬೂಬ ಮುಫ್ತಿ ಭಾಷಣ ಮಾಡಿದ್ದ ಬಕ್ಷೀ ಸ್ಟೇಡಿಯಂನ ಸಮೀಪದಲ್ಲೇ ಇರುವ ನೌಹಾಟ್ಟದಲ್ಲಿ ಈ ದಾಳಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.