ADVERTISEMENT

ಶ್ರೀ ಅನಂತಪದ್ಮನಾಭಸ್ವಾಮಿ ದೇವಾಲಯ: ಅಷ್ಟೈಶ್ವರ್ಯ ದಾಖಲಾತಿಗೆ ಅಂತರರಾಷ್ಟ್ರೀಯ ಮಾನದಂಡ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ತಿರುವನಂತರಪುರ (ಪಿಟಿಐ): ಪ್ರಸಿದ್ಧ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ರಹಸ್ಯ ನೆಲಮಾಳಿಗೆಯಲ್ಲಿ ಶೋಧಿಸಿರುವ ಅಷ್ಟೈಶ್ವರ್ಯದ ವೈಜ್ಞಾನಿಕ ದಾಖಲಾತಿಗೆ ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ಮಂಡಳಿ ರೂಪಿಸಿರುವ ಮಾನದಂಡಗಳನ್ನು ಅನುಸರಿಸಲಿದೆ.

`ಉನ್ನತ ತಂತ್ರಜ್ಞಾನ ಹಾಗೂ ನಿಯಮದ ಪ್ರಕಾರ ನಾವು ಈ ಕಾರ್ಯವನ್ನು ನಡೆಸಲಿದ್ದೇವೆ. ಈ ಪ್ರಕ್ರಿಯೆಯಲ್ಲಿ ನಾವು ಅಂತರ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮಂಡಳಿ ರೂಪಿಸಿರುವ ಮಾನದಂಡಗಳನ್ನು ಅನುಸರಿಸುತ್ತೇವೆ~ ಎಂದು ಸಮಿತಿಯ ಸಂಯೋಜಕ ಡಾ. ಎಂ.ವಿ.ನಾಯರ್ ಸ್ದ್ದುದಿ ಸಂಸ್ಥೆಗೆ ತಿಳಿಸಿದ್ದಾರೆ.

ನಾಯರ್ ಅವರನ್ನು ಸಮಿತಿಯ ಸಂಯೋಜಕರನ್ನಾಗಿ ನೇಮಕ ಮಾಡಲು ಗುರುವಾರವಷ್ಟೇ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

ದಾಖಲಾತಿ ಕಾರ್ಯದಲ್ಲಿ, ನೆಲಮಾಳಿಗೆಯಲ್ಲಿ ಶೋಧಿಸಲಾದ ಬೆಲೆಬಾಳುವ ವಸ್ತುಗಳ ವರ್ಗೀಕರಣ ಕೂಡ ಸೇರುತ್ತದೆ. ಸಮಗ್ರ ಪರಿಶೀಲನೆ ನಡೆದ ಬಳಿಕ ಪೂಜಾ ಸಾಮಗ್ರಿ, ನಿತ್ಯಬಳಕೆಯ ವಸ್ತುಗಳು ಹಾಗೂ ವಸ್ತುಸಂಗ್ರಹಾಲಯದಲ್ಲಿ ಇಡುವ ವಸ್ತುಗಳು- ಎಂದು ಮೂರು ವಿಭಾಗ ಮಾಡಲಾಗುತ್ತದೆ ಎಂದು ನಾಯರ್ ಹೇಳಿದ್ದಾರೆ.

ಈ ವಸ್ತುಗಳ ಮೌಲ್ಯಮಾಪನದ ವೇಳೆ ಭವಿಷ್ಯದ ಸಂಶೋಧನೆ, ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನ ಹಾಗೂ ಪರಂಪರೆ... ಇತ್ಯಾದಿ ಹಿನ್ನೆಲೆಯನ್ನು ಗಮನಿಸಲಾಗುತ್ತದೆ ಎಂದೂ ವಿವರಿಸಿದ್ದಾರೆ.

ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ಕೃಷ್ಣನ್ ಅವರ ನೇತೃತ್ವದ ಮೇಲ್ವಿಚಾರಣಾ ಸಮಿತಿಯೊಂದಿಗೆ ಜಂಟಿ ಸಮಾಲೋಚನೆ ನಡೆಸಿದ ಬಳಿಕ ದಾಖಲಾತಿ ಕಾರ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.